ಲುಧಿಯಾನಾ, ನ 24(Daijiworld News/MB) : ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ್ನು ಭಾರತ ರದ್ದು ಮಾಡಿದ ಹಿನ್ನಲೆಯಲ್ಲಿ ಪಾಕಿಸ್ತಾನ ಮೂರು ತಿಂಗಳ ಹಿಂದೆ ಭಾರತದ ಜತೆಗೆ ಇದ್ದ ಅಂಚೆ ಸಂಬಂಧವನ್ನು ಕಡಿದುಕೊಂಡಿತ್ತು. ಆದರೆ ಇದೀಗ ವಾಘಾ ಗಡಿಯ ಮೂಲಕ ಭಾಗಶಃ ಸಾಮಾನ್ಯ ಅಂಚೆ ಸೇವೆ ಮತ್ತು ಎಕ್ಸ್ಪ್ರೆಸ್ ಮೈಲ್ ಸೇವೆಗಳು ಶುರುವಾಗಿವೆ.
ಈ ಕುರಿತು ಮೂರು ದಿನಗಳ ಹಿಂದೆ ಪಾಕಿಸ್ಥಾನದ ಅಂಚೆ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಎರಡು ದೇಶಗಳ ನಡುವೆ ಪಾರ್ಸೆಲ್ ಮತ್ತು ಇತರ ಅಂಚೆ ಸೇವೆಗಳು ಇನ್ನೂ ಆರಂಭವಾಗಿಲ್ಲ.
ಪಾಕಿಸ್ಥಾನ ಭಾಗಶಃ ಅಂಚೆ ಸೇವೆ ಆರಂಭ ಮಾಡಿದ ಕಾರಣದಿಂದ ವಿದೇಶಾಂಗ ಇಲಾಖೆ ಕೂಡ ಭಾರತದ ವತಿಯಿಂದ ಅಂಚೆ ಸೇವೆಗಳನ್ನು ಪುನರಾರಂಭಿಸುವುದರ ನಿರ್ಧಾರ ಕೈಗೊಂಡಿದೆ.
ಈ ಕುರಿತು ಭಾರತೀಯ ಅಂಚೆಯ ಇಲಾಖೆಯ ಅಂತಾರಾಷ್ಟ್ರೀಯ ವಿಭಾಗದ ಉಪ ಮಹಾನಿರ್ದೇಶಕ ತನ್ವೀರ್ ಖಮರ್ ಮೊಹಮ್ಮದ್ ಖಚಿತಪಡಿಸಿದ್ದು "ಪಾಕಿಸ್ತಾನ ತನ್ನ ಅಂಚೆ ಸೇವೆ ಪುನರ್ ಆರಂಭ ಮಾಡಿರುವುದು ಮಾಧ್ಯಮಗಳ ಮುಖೇನ ತಿಳಿದಿದೆ. ಹಾಗಾಗೀ ಭಾರತದ ವತಿಯಿಂದಲೂ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪಾಕಿಸ್ಥಾನಕ್ಕೆ ಕಳುಹಿಸಬೇಕಾಗಿದ್ದ ಪತ್ರಗಳನ್ನು ಮೂರು ತಿಂಗಳ ಅವಧಿಯಲ್ಲಿ ಕಳುಹಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.