ಇಸ್ಲಾಮಾಬಾದ್, ನ.26(Daijiworld News/SS): ಇಮ್ರಾನ್ ಖಾನ್ ಲಕ್ಷಾಂತರ ಡಾಲರ್ ಹಣವನ್ನು ಮರೆಮಾಚಿದ್ದಾರೆ ಎಂದು ಮಾಜಿ ಸಚಿವ ಅಹ್ಸಾನ್ ಇಕ್ಬಾಲ್ ಗಂಭೀರ ಆರೋಪ ಮಾಡಿದ್ದಾರೆ.
ಇತರರನ್ನು ಕಳ್ಳರು, ವಂಚಕರು ಎಂದು ಕರೆಯುವ ಇಮ್ರಾನ್ ಖಾನ್ ಸ್ವತಃ ಭ್ರಷ್ಟ ವ್ಯಕ್ತಿಯಾಗಿದ್ದಾನೆ ಎಂದು ಅಹ್ಸಾನ್ ಆರೋಪಿಸಿದ್ದಾರೆ. ಮಾತ್ರವಲ್ಲ, ಇಮ್ರಾನ್ ಖಾನ್ ಯಾವುದೇ ಹಣವನ್ನು ಮುಚ್ಚಿಡದೆ ಎಲ್ಲ ವಿವರಗಳನ್ನು ಪ್ರಸ್ತುತ ಪಡಿಸಬೇಕು. ಇಸಿಪಿಯಿಂದ 23 ಬ್ಯಾಂಕ್ ಖಾತೆಗಳನ್ನು ಏಕೆ ಮುಚ್ಚಿಟ್ಟಿದ್ದಾರೆ ಎಂಬುದನ್ನು ರಾಷ್ಟ್ರ ತಿಳಿದುಕೊಳ್ಳಲು ಬಯಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ವಿವಾದದ ಕುರಿತು ಮಾತನಾಡಿದ ಅವರು, ಚೀನಾದಿಂದ 18 ಬಿಲಿಯನ್ ಡಾಲರ್ ಸಾಲ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಪಾಕಿಸ್ತಾನ ಚೀನಾದಿಂದ ಸಾಲ ಪಡೆದ ಒಟ್ಟು ಮೊತ್ತ ಕೇವಲ 41.61 ಸಾವಿರ ಕೋಟಿ ರೂ. ಆಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸರ್ಕಾರ ಇದ್ದಾಗ ಈ ಸಿಪಿಇಸಿ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.