ವಾಷಿಂಗ್ಟನ್, ನ 26 (Daijiworld News/MB) : ಭಾರತೀಯ ಮೂಲದ 19 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಿದ ದಾರುಣ ಘಟನೆ ಚಿಕಾಗೋದಲ್ಲಿ ನಡೆದಿದೆ.
ಚಿತ್ರ- ಫೇಸ್ಬುಕ್ ಕೃಪೆ
ಮೃತ ವಿದ್ಯಾರ್ಥಿನಿಯನ್ನು ಹೈದರಾಬಾದ್ ಮೂಲದ ರುತ್ ಜಾರ್ಜ್ ಎಂದು ಗುರುತಿಸಲಾಗಿದ್ದು, ಆಕೆ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಳು ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿ ಆರೋಪಿ ಡೊನಾಲ್ಡ್ ಥರ್ಮನ್ (26) ಅವರನ್ನು ಚಿಕಾಗೊ ಮೆಟ್ರೋ ನಿಲ್ದಾಣದಿಂದ ನವೆಂಬರ್ 24 ರ ಭಾನುವಾರ ಬಂಧಿಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.
ಜಾರ್ಜ್ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಕಿನಿಸಿಯಾಲಜಿ ಮೇಜರ್ ಆಗಿದ್ದು ನವೆಂಬರ್ 22ರ ಶುಕ್ರವಾರದಿಂದ ಕಾಣೆಯಾಗಿದ್ದರು. ಈ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಜಾರ್ಜ್ ನ ಮೊಬೈಲ್ ಪೋನ್ ಹಾಲ್ಸ್ಟೆಡ್ ಸ್ಟ್ರೀಟ್ ಪಾರ್ಕಿಂಗ್ ಗ್ಯಾರೇಜ್ನಲ್ಲಿ ತೋರಿಸಿದ ಕಾರಣ ಅಲ್ಲಿಗೆ ಪೊಲೀಸರು ಹಾಗೂ ಪೋಷಕರು ತಲುಪಿದ್ದು ಅವರ ಕುಟುಂಬಸ್ಥರ ಕಾರಿನ ಹಿಂಬದಿ ಸೀಟ್ನಲ್ಲಿ ಮೃತ ದೇಹ ಪತ್ತೆಯಾಗಿದೆ.
ಕಾರನ್ನು ವಿಧಿವಿಜ್ಞಾನ ತನಿಖೆಗೆ ಒಳಪಡಿಸಿದ ಪೊಲೀಸರು, ವಿಶ್ವವಿದ್ಯಾನಿಲಯದ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾದ ವಿಡಿಯೋವನ್ನು ಪರಿಶೀಲನೆ ಮಾಡಿದ್ದು ಘಟನೆ ನಡೆದ ಕೆಲವೇ ಗಂಟೆಗಳ ಮೊದಲು ಆರೋಪಿ ಡೊನಾಲ್ಡ್ ಥರ್ಮನ್ ಆ ಸ್ಥಳದಲ್ಲಿ ಇದದ್ದು ಕಂಡು ಬಂದಿದೆ. ವಿಡಿಯೋದಲ್ಲಿ ಕಾಣುವಂತೆ ಥರ್ಮನ್ ಮಧ್ಯಾಹ್ನ ಸುಮಾರು 1:35 ಗಂಟೆಗೆ ಅಲ್ಲಿದ್ದು ಬಳಿಕ ಪುನಹಃ 2:10ಕ್ಕೆ ಹಾಲ್ಸ್ಟೆಡ್ ದಾರಿಯಲ್ಲಿ ನಡೆದುಕೊಂಡು ಹೋಗಿದ್ದಾನೆ.
ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುವ ನಿಟ್ಟಿನಲ್ಲಿ ಬೇರೆ ಬೇರೆ ಪ್ರದೇಶದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ.