ಚಿಕಾಗೋ, ನ 28(Daijiworld News/MSP): ಭಾರತೀಯ ಮೂಲದ 19 ವರ್ಷದ ವಿದ್ಯಾರ್ಥಿನಿ ರುತ್ ಜಾರ್ಜ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಿದ ದಾರುಣ ಘಟನೆ ಚಿಕಾಗೋದಲ್ಲಿ ವರದಿಯಾಗಿತ್ತು. ಆದರೆ ಹತ್ಯೆಯ ನೈಜ ಕಾರಣ ಇದೀಗ ಬಯಲಾಗಿದೆ. ಆರೋಪಿ, ತನಗೆ ಅಪರಿಚಿತಳಾಗಿದ್ದ ವಿದ್ಯಾರ್ಥಿನಿ ರುತ್ ಳನ್ನು ಮಾತನಾಡಲು ಯತ್ನಿಸಿದಾಗ ಆಕೆ ಆತನನ್ನು ಕಡೆಗಣಿಸಿದ್ದು ಕೊಲೆಗೆ ನೈಜ ಕಾರಣ ಎಂದು ಬಯಲಾಗಿದೆ.
ಜಾರ್ಜ್ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ರುತ್ ಜಾರ್ಜ್ ನವೆಂಬರ್ 22ರ ಶುಕ್ರವಾರದಂದು ಕಾಣೆಯಾಗಿದ್ದಳು. ಈ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಜಾರ್ಜ್ ನ ಮೊಬೈಲ್ ಹಾಲ್ಸ್ಂಡ್ ಸ್ಟ್ರೀಟ್ ಪಾರ್ಕಿಂಗ್ ಗ್ಯಾರೇಜ್ ಲ್ಲಿ ತೋರಿಸಿದ ಕಾರಣ ಆಕೆಗಾಗಿ ಶೋಧಿಸಿದಾಗ ಆಕೆ ಕುಟುಂಬದ ಕಾರಿನ ಹಿಂಬದಿ ಸೀಟ್ನಲ್ಲಿ ರುತ್ ಜಾರ್ಜ್ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋವನ್ನು ಪರಿಶೀಲನೆ ಮಾಡಿದ್ದು ಘಟನೆ ನಡೆದ ಕೆಲವೇ ಗಂಟೆಗಳ ಮೊದಲು ಆರೋಪಿ ಡೊನಾಲ್ಡ್ ಥರ್ಮನ್ ಆ ಸ್ಥಳದಲ್ಲಿ ಓಡಾಟ ನಡೆಸಿರುವುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಆರೋಪಿ ಡೊನಾಲ್ಡ್ ಥರ್ಮನ್ (26) ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಾಥಮಿಕ ವರದಿ ಪ್ರಕಾರ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿತ್ತು.
ನ್ಯಾಯಾಲಯದ ದಾಖಲೆಗಳ ಪ್ರಕಾರ, "ರುತ್ ಜಾರ್ಜ್ ಸುರಂಗಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಥರ್ಮನ್ ಅವಳನ್ನು ಗಮನಿಸಿ ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ರುತ್ ಆತನೊಂದಿಗೆ ಮಾತನಾಡದೆ ಕಡೆಗಣಿಸಿ ಮುಂದುವರಿದಾಗ ಆಕೆಯ ಕುತ್ತಿಗೆಗೆ ಹಿಡಿದು (ಚೋಕ್ಹೋಲ್ಡ್) ಹತ್ಯೆ ಮಾಡಿದ್ದ" ಎಂದು ತಿಳಿದುಬಂದಿದೆ.