ಲಂಡನ್, ಡಿ 08 (Daijiworld News/MB) : ಯುಕೆ ಕೋರ್ಟ್ ಸುಮಾರು 2 ಬಿಲಿಯನ್ ಯುಎಸ್ಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಆರೋಪ ಹೊತ್ತಿರುವ ನೀರವ್ ಮೋದಿ ಅವರ ವಿಚಾರಣೆಗೆ ಜನವರಿ 2ರಂದು ವಿಡಿಯೋಲಿಂಕ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಿದೆ.
ಡಿಸೆಂಬರ್ 4ರಂದು ನೀರವ್ ಮೋದಿ ಲಂಡನ್ನಿನ ವಾಂಡ್ಸ್ವರ್ತ್ ಜೈಲಿನಿಂದ 28 ದಿನಗಳ ನಿಯಮಿತ "ಕಾಲ್-ಓವರ್" ಅಪಿಯರೆನ್ಸ್ ಗಾಗಿ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರಾಗಿದ್ದು ಈ ವೇಳೆ ನ್ಯಾಯಾಧೀಶ ಗರೆಥ್ ಬ್ರಾನ್ಸ್ಟನ್ "2020 ರ ಮೇ 11 ರಂದು ಮೋದಿ ಹಸ್ತಾಂತರವು ಪ್ರಾರಂಭವಾಗಲಿದ್ದು ಐದು ದಿನಗಳಲ್ಲಿ ಪ್ರಕ್ರಿಯೆ ಅಂತ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.
ಹಾಗೆಯೇ ನೀರವ್ ಮೋದಿ 2020 ರ ಜನವರಿ 2 ರಂದು ವಿಡಿಯೋಲಿಂಕ್ ಮೂಲಕ ನ್ಯಾಯಾಲಯದಲ್ಲಿ ಹಾಜರಾಗಬೇಕೆಂದು ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಹಾಗೆಯೇ 28 ದಿನಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ನೀರವ್ ಮೋದಿ ಕಳೆದ ತಿಂಗಳು ಮತ್ತೊಂದು ಜಾಮೀನು ಅರ್ಜಿ ಸಲ್ಲಿಸಿದ್ದು ಅದೂ ಕೂಡಾ ನ್ಯಾಯಾಲಯದಲ್ಲಿ ತಿರಸ್ಕಾರವಾಗಿತ್ತು.