ಇಸ್ಲಾಮಾಬಾದ್, ಡಿ 10 (Daijiworld News/MSP): ಲೋಕಸಭೆಯಲ್ಲಿ ಮಧ್ಯರಾತ್ರಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಮಸೂದೆಯನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ. ಈ ಮಸೂದೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಎಲ್ಲಾ ನಿಯಮಗಳನ್ನು ಮತ್ತು ತಮ್ಮ ದೇಶದೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ಭಾರತದ ಪೌರತ್ವ ತಿದ್ದುಪಡಿ ವಿಧೇಯಕದ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಮುಸ್ಲಿಂರನ್ನು ಹೊರಗಿಟ್ಟು, ಮುಸ್ಲಿಮೇತರ ನಿರಾಶ್ರಿತರಿಗೆ ಮಾತ್ರ ಕಾಯಂ ಪೌರತ್ವ ನೀಡಲಾಗುತ್ತದೆ ಎಂದು ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುವ ಭಾರತದ ಪೌರತ್ವ ಮಸೂದೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪೌರತ್ವ ತಿದ್ದುಪಡಿ ಮಸೂದೆ ಫ್ಯಾಸಿಸ್ಟ್ ಮೋದಿ ಸರ್ಕಾರ ಪ್ರಚಾರ ಮಾಡುತ್ತಿರುವ ಆರ್.ಎಸ್.ಎಸ್ ನ ಅಲೋಚನೆಯಾದ ಹಿಂದು ರಾಷ್ಟ್ರ ವಿಸ್ತರಣಾವಾದದ ಒಂದು ಭಾಗ ಎಂದು ಟ್ವೀಟ್ ಮಾಡಿ ವಿರೋಧಿಸಿದ್ದಾರೆ.