ನ್ಯೂಯಾರ್ಕ್ ಡಿ 14 (Daijiworld News/MSP): ಹಬ್ಬಗಳು ಬಂದಾಗ ಕಂಪನಿಗಳು ತಮ್ಮ ನೌಕರರಿಗೆ ಬೋನಸ್ ನೀಡುವುದು ಸಾಮಾನ್ಯ ಸಂಗತಿ. ಆದರೆ ಅಮೇರಿಕಾದ ಖಾಸಗಿ ಸಂಸ್ಥೆಯೊಂದು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ತಮ್ಮ ನೌಕರರಿಗೆ ನೀಡಿದ ಉಡುಗೊರೆಯ ಸುದ್ದಿ ಕೇಳಿದವರೆಲ್ಲಾ ಕೂಡಾ ನಮಗೂ "ಇಂಥ ಬಾಸ್ ಇರಲಪ್ಪ" ಎಂದು ಪ್ರಾರ್ಥಿಸುವಂತಾಗಿದೆ.
ತನ್ನ ಕಂಪನಿಯ ನಿರ್ಧಾರ ಕಂಡು ನೌಕರರೇ ಹೌಹಾರಿದ್ದು, ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಸೇಂಟ್ ಜಾನ್ ಪ್ರಾಪರ್ಟೀಸ್ ಇಂತಹ ವಿಶೇಷ ನಿರ್ಧಾರ ಮಾಡಿ ನೌಕರರ ಬೋನಸ್ ಗಾಗಿಯೇ ೭೧ ಕೋಟಿ ತೆಗೆದಿರಿಸಿದೆ.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತನ್ನ ಒಟ್ಟು 198 ಸಿಬ್ಬಂದಿಗೆ ತಲಾ 35.50 ಲಕ್ಷ ನೀಡಿದ್ದಾರೆ. ಮೊದಲು ಬೋನಸ್ ಗಾಗಿ ಕೇವಲ ೭ ಕೋಟಿ ತೆಗೆದಿರಿಸಲಾಗಿತ್ತಂತೆ, ಆದರೆ ಇದು ನೌಕರರಿಗೆ ವಿಂಗಡಿಸಿದಾಗ ಅವರ ಕೈಸೇರುವುದು ಅಲ್ಪ ಪ್ರಮಾಣದ ಹಣ ಎಂದು ಪ್ರತಿ ಸಿಬ್ಬಂದಿಗೂ 35 ಲಕ್ಷಕ್ಕಿಂತಲೂ ಅಧಿಕ ಹಣ ಬರುವಂತೆ ಮಾಡಿ, ಬೋನಸ್ಗೆ 71 ಕೋಟಿ ವಿನಿಯೋಗಿಸಲು ಸಂಸ್ಥೆ ಮುಖ್ಯಸ್ಥ ಸೇಂಟ್ ಜಾನ್ ನಿರ್ಧರಿಸಿದ್ದಾರೆ.
ಕಂಪನಿಯ ಯಶಸ್ವಿಗೆ ಸಿಬ್ಬಂದಿಗಳೇ ಕಾರಣ ನಮ್ಮ ನೌಕರರು ವಾರ್ಷಿಕ ಟಾರ್ಗೆಟ್ನ್ನು ಮೀರಿ ಕೆಲಸ ಮಾಡಿದ್ದಾರೆ. ಹೀಗಿರುವಾಗ ಅವರಿಗೆ ಖುಷಿಯಾಗುವ ರೀತಿಯಲ್ಲಿ ಬೋನಸ್ ನೀಡುವುದು ಹಾಗೂ ಸಿಬ್ಬಂದಿಯಲ್ಲಿ ಉತ್ಸಾಹ ಮೂಡಿಸುವುದು ಕಂಪನಿಯ ಕರ್ತವ್ಯವಾಗಿದೆ ಎಂದು ಜಾನ್ ಹೇಳಿಕೊಂಡಿದ್ದಾರೆ.