ಆಸ್ಟ್ರೇಲಿಯಾ, ಡಿ 31 (Daijiworld News/PY) : ಆಗ್ನೇಯಾ ಆಸ್ಟ್ರೇಲಿಯಾದಲ್ಲಿನ ಪ್ರಸಿದ್ದ ಪ್ರವಾಸಿ ತಾಣವು ಬೆಂಕಿಗೆ ಆವೃತ್ತವಾಗಿದ್ದು, ಕಡಲ ಕಿನಾರೆಗೆ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ಹಾಗೂ ಸ್ಥಳೀಯರು ರಕ್ಷಣೆಗಾಗಿ ಪರದಾಡುವಂತಾಗಿದೆ.
ಕಡಲ ಕಿನಾರೆಯ ಮಲ್ಲಕೂಟ ಪಟ್ಟಣವು ಬೆಂಕಿಯಿಂದ ಆವೃತ್ತವಾಗಿದ್ದು, ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ವ್ಯಾಪಿಸಿದ್ದು, ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕಡಲ ಕಿನಾರೆಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಭಾರಿ ಗಾಳಿ ಬೀಸುತ್ತಿರುವ ಕಾರಣ ಬೆಂಕಿಯ ಕೆಂಡದ ಚೂರುಗಳು ಗಾಳಿಯಲ್ಲಿ ಹಾರಿಬರುತ್ತಿರುವುದರಿಂದ ಜನರು ಭಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯ ಜ್ವಾಲೆಗೆ ಸಿಕ್ಕಿಹಾಕಿಕೊಂಡಿರುವ ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸುತ್ತಿದ್ದಾರೆ ಎಂದು ವಿಕ್ಟೋರಿಯಾದ ತುರ್ತು ನಿರ್ವಹಣೆ ಆಯುಕ್ತ ಆಂಡ್ಯ್ರೂ ಕ್ರಿಸ್ಟ್ ತಿಳಿಸಿದ್ದಾರೆ.
ಬೇಸಿಗೆ ವಿಹಾರಕ್ಕಾಗಿ ಆಸ್ಟ್ರೇಲಿಯಾದ ಪ್ರಸಿದ್ಧ ತಾಣಕ್ಕೆ ಆಗಮಿಸಿದ 30ಸಾವಿರಕ್ಕೂ ಹೆಚ್ಚಿನ ಪ್ರವಾಸಿಗಳನ್ನು ಹಲವು ದಿನಗಳಿಂದ ಈ ಪ್ರದೇಶದಿಂದ ಹೋಗುವಂತೆ ಅಧಿಕಾರಿಗಳು ಎಚ್ಚರಿಸಿದ್ದರು ಎಂದು ತಿಳಿದುಬಂದಿದೆ.
ಬೆಂಕಿಯ ಜ್ವಾಲೆಗೆ ಸಿಲುಕಿ ಹಾಕಿಕೊಂಡವರನ್ನು ಮೂರು ರಕ್ಷಣಾ ತಂಡಗಳು ರಕ್ಷಿಸುತ್ತಿದ್ದು, ಅಗತ್ಯವಾದಲ್ಲಿ ಇವರನ್ನು ವಾಯು ಅಥವಾ ಸಮುದ್ರ ಮಾರ್ಗದಲ್ಲಿ ಸುರಕ್ಷಿತವಾಗಿ ಹೊರತರುವಂತೆ ಪ್ರಯತ್ನ ಮಾಡಲಾಗುತ್ತದೆ ಎಂದು ಕ್ರಿಸ್ಟ್ ತಿಳಿಸಿದ್ದಾರೆ.
ಬೆಂಕಿ ಆವರಿಸಿಕೊಂಡ ಜಾಗದಲ್ಲಿ ಉಷ್ಣತೆ ಹೆಚ್ಚಿ ಬೆಂಕಿ ಪೂರ್ತಿಯಾಗಿ ಆವರಿಸುವ ಮೊದಲೇ ಹಲವು ಜನರಿಗೆ ಪ್ರಾಣಾಪಾಯವಾಗಬಹುದು ಎಂದು ಆಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಪಟ್ಟಣಕ್ಕೂ ಆವರಿಸುತ್ತಿದ್ದು ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ. ಆದರೂ ಜನರಿಗೆ ಎಚ್ಚರಿಕೆ ನೀಡಲು ರೇಡಿಯೋ ಮೂಲಕ ಸಂದೇಶ ರವಾನಿಸುತ್ತಿದ್ದಾರೆ, ತನ್ನ ಮನೆಯತ್ತ ಕೂಡಾ ಬೆಂಕಿಯ ಜ್ವಾಲೆ ಆವರಿಸುತ್ತಿದೆ ಎಂದು ಪತ್ರಕರ್ತೆ ಫ್ರಾನ್ಸಿಸ್ಕೊ ವಿಂಟರ್ಸನ್ ತಿಳಿಸಿದ್ದಾರೆ.