ಟೆಹರಾನ್, ಜ 11 (Daijiworld News/MB) : ಇತ್ತೀಚಿಗಷ್ಟೆ ಸುಮಾರು 176 ಜನರ ಸಾವಿಗೆ ಕಾರಣವಾಗಿದ್ದ ಉಕ್ರೇನ್ ವಿಮಾನ ಪತನವನ್ನು ಮಾಡಿದ್ದು ನಾವೇ, ಅಚಾತುರ್ಯದಿಂದ ಉಕ್ರೇನ್ ವಿಮಾನ ಹೊಡೆದುರುಳಿಸಿದ್ದೇವೆ ಎಂದು ಇರಾನ್ ಕ್ಷಮೆಯಾಚಿಸಿದೆ.
ಈ ಘಟನೆ ನಡೆದ ದಿನ ವಿಷಾದದ ದಿನ. ಅಮೆರಿಕದಿಂದಾಗಿ ಉಂಟಾದ ಬಿಕ್ಕಟ್ಟಿನ ಸಮಯದಲ್ಲಿ ಮಾನವ ಸಹಜವಾಗಿ ನಮ್ಮಿಂದ ತಪ್ಪು ನಡೆದಿದೆ. ಇರಾನ್ ಪಡೆ ಆತಂರಿಕ ತನಿಖೆ ನಡೆಸಿದ್ದು ಅದರಲ್ಲಿ ದೊರಕಿದ ಪ್ರಾಥಮಿಕ ವರದಿ ಇದಾಗಿದೆ. ದುರಂತದಲ್ಲಿ ಸಾವನ್ನಪ್ಪಿದ ನಮ್ಮ ಪ್ರಜೆಗಳಿಗೂ ಹಾಗೂ ಇತರ ರಾಷ್ಟ್ರಗಳ ಕುಟುಂಬವರಿಗೂ ನಾವು ತೀವ್ರ ಸಂತಾಪ ಸೂಚಿಸುತ್ತೇವೆ. ಹಾಗೆಯೇ ಕ್ಷಮೆಯಾಚಿಸುತ್ತೇವೆ ಎಂದು ಇರಾನ್ನ ವಿದೇಶಾಂಗ ಸಚಿವ ಜಾವೆದ್ ಝಾರೀಫ್ ಟ್ವೀಟ್ ಮಾಡಿದ್ದಾರೆ.
ಇರಾನ್ ರಾಜಧಾನಿ ಟೆಹರಾನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಬೋಯಿಂಗ್ 737 ಸರಣಿಯ ಈ ವಿಮಾನ ಪತನವಾಗಿತ್ತು. ಈ ವಿಮಾನದಲ್ಲಿ ಇರಾನ್ನ 82, ಕೆನಡಾದ ಕನಿಷ್ಠ 63, ಉಕ್ರೇನ್ನ 11 ಪ್ರಯಾಣಿಕರು ಇದ್ದು ಅವರೆಲ್ಲರೂ ಅಸುನೀಗಿದ್ದರು.