ಕುವೈಟ್, ಜ.13 (Daijiworld News/PY) : ಕಮರ್ಷಿಯಲ್ ವೀಸಾದಲ್ಲಿ ಕುವೈಟ್ಗೆ ತೆರಳಿದ್ದ ಮೂವರು ಭಾರತೀಯರು ತಮ್ಮದಲ್ಲದ ತಪ್ಪಿಗಾಗಿ ಕುವೈಟ್ ಪೊಲೀಸರಿಂದ ಬಂಧಿತರಾಗಿ ಜೈಲುಪಾಲಾಗಿದ್ದಾರೆ.
ಮುಂಬೈಯ ಅಂಕಿತ್ ಶಿವಪ್ಪ ನಾಯ್ಕ್(29), ಚಿತ್ರದುರ್ಗ ಜಿಲ್ಲೆಯ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೃಷ್ಣಮೂರ್ತಿ ಶಂಕರ ನಾಯ್ಕ್( 26), ಹಾಗೂ ಆಂಧ್ರಪ್ರದೇಶದ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನಿತೀಶ್ ಗಣೇಶ್ ಮನಿಕೇರಿ(29) ಎಂಬುವವರನ್ನು ಕುವೈಟ್ನಲ್ಲಿ ಬಂಧಿಸಲಾಗಿದೆ.
ಕುವೈಟ್ನ ಬ್ಯಾಂಕ್ವೊಂದರಲ್ಲಿ ಉದ್ಯೋಗದಲ್ಲಿರುವ ಬೆಂಗಳೂರಿನ ಆನಂದ್ ತಮ್ಮ ಅಂಗವಿಕಲ ಪುತ್ರನನ್ನು ಕುವೈಟ್ಗೆ ಕರೆಸಿಕೊಂಡಿದ್ದರು. ಆತನನ್ನು ನೋಡಿಕೊಳ್ಳಲು ಕೃಷ್ಣಮೂರ್ತಿ ಶಂಕರ ನಾಯ್ಕ್ ಎಂಬುವವರು ಜೊತೆಗೆ ತೆರಳಿದ್ದರು. ಈ ವೇಳೆ ಕೃಷ್ಣಮೂರ್ತಿ ಅವರ ಜೊತೆ ಇಬ್ಬರು ಸ್ನೇಹಿತರಾದ ಅಂಕಿತ್ ಶಿವಪ್ಪ ನಾಯ್ಕ್ ಹಾಗೂ ನಿತೀಶ್ ಗಣೇಶ್ ಮನಿಕೇರಿ ಸಹ ತೆರಳಿದ್ದರು.
ಈ ಸಂದರ್ಭ ಕುವೈಟ್ನಲ್ಲಿ ವೀಸಾ ಏಜೆಂಟ್ ಆಗಿರುವ ಮೊಹ್ದ್ ಹಸನ್ ಎಂಬಾತ ಈ ನಾಲ್ಕು ಜನರಿಗೆ ಕಮರ್ಷಿಯಲ್ ವೀಸಾ ಮಾಡಿಸಿಕೊಟ್ಟಿದ್ದ. ಕಮರ್ಷಿಯಲ್ ವೀಸಾ ಮೂಲಕ ನಾಲ್ಕು ಜನರು ಕಳೆದ ವಾರ ಕುವೈಟ್ಗೆ ತೆರಳಿ ತಿರುಗಾಟ ನಡೆಸಿ ಜ.9 ಗುರುವಾರ ಅಲ್ಲಿಂದ ಭಾರತಕ್ಕೆ ವಾಪಾಸಾಗುವ ವೇಳೆ ಕುವೈಟ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ನಾಲ್ವರನ್ನು ತಡೆದಿದ್ದಾರೆ.
ಅಂಕಿತ್ ಶಿವಪ್ಪ ನಾಯ್ಕ್, ಕೃಷ್ಣಮೂರ್ತಿ ಶಂಕರ ನಾಯ್ಕ್, ನಿತೀಶ್ ಗಣೇಶ್ ಮನಿಕೇರಿ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಈ ಮೂವರ ಬಂಧನಕ್ಕೆ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಇದೀಗ ಅವರಿಗೆ ಕಮರ್ಷಿಯಲ್ ವೀಸಾ ಮಾಡಿಸಿಕೊಟ್ಟಿದ್ದ ಏಜೆಂಟ್ ಮೊಹ್ದ್ ಹಸನ್ ಮೇಲೆ ಸಂಶಯ ಬಂದಿದೆ ಎಂದು ತಿಳಿದುಬಂದಿದೆ.
ಒಮಾನ್ ದೇಶದ ದೊರೆ ಸಾವನ್ನಪ್ಪಿದ ಕಾರಣ 3 ದಿನ ಶೋಕಾಚರಣೆ ಪ್ರಯುಕ್ತ ಸರಕಾರಿ ರಜೆ ನೀಡಲಾಗಿದೆ. ಹಾಗಾಗಿ ಇನ್ನು ಮಂಗಳವಾರದ ತನಕ ಈ ಮೂರು ಭಾರತೀಯರು ಕುವೈಟ್ ಜೈಲಿನಲ್ಲಿ ಉಳಿಯುವುದು ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.
ಈ ಮೂರು ಜನ ಭಾರತೀಯರ ಬಿಡುಗಡೆಗೆ ಕುವೈಟ್ನಲ್ಲಿರುವ ಮಂಗಳೂರಿನ ಎಂ. ಮೋಹನ್ ದಾಸ್ ಕಾಮತ್ ಹಾಗೂ ಅನಿಲ್ ಪ್ರಭು ಪ್ರಯತ್ನಿಸುತ್ತಿದ್ದು, ಈಗಾಗಲೆ ಅವರು ಕುವೈಟ್ನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ. ಆದರೆ 3 ದಿನಗಳ ಕಾಲ ಶೋಕಾಚರಣೆ ಪ್ರಯುಕ್ತ ಸರಕಾರಿ ರಜೆ ಇರು ಕಾರಣ ಕುವೈಟ್ ಸರಕಾರದ ಪರವಾಗಿ ಯಾವುದೇ ಅಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.