ಬೀಜಿಂಗ್, ಜ 17 (Daijiworld News/MSP): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಭಾರತಕ್ಕೆ ಮತ್ತೆ ಪಾಕಿಸ್ತಾನದ ಮಿತ್ರ ರಾಷ್ಟ್ರ ಚೀನಾ ಅಡ್ಡಗಾಲು ಹಾಕಲು ನೋಡುತ್ತಿದೆ. ಆದರೆ ವಿಶ್ವಸಂಸ್ಥೆಯ 5 ಶಾಶ್ವತ ಸದಸ್ಯ ದೇಶಗಳಾಗಿರುವ ಇಂಗ್ಲೆಂಡ್, ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಭಾರತದ ಶಾಶ್ವತ ಸದಸ್ಯ ಸ್ಥಾನ ಪಡೆಯಲು ಬೆಂಬಲ ನೀಡಿವೆ.
ಆರ್ಥಿಕ ಬೆಳವಣಿಗೆ, ಹಣಕಾಸಿನ ಶಕ್ತಿ, ರಾಜಕೀಯ ಪ್ರಭಾವಗಳನ್ನು ನೋಡಿದರೆ ಭಾರತವೂ ವಿಶ್ವಸಂಸ್ಥೆಯ ಶಾಶ್ವತ ಸದಸ್ಯ ರಾಷ್ಟ್ರವಾಗುವ ಅರ್ಹತೆಯನ್ನು ಹೊಂದಿದೆ ಎಂದು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಬೆಂಬಲ ವ್ಯಕ್ತಪಡಿಸಿದ್ದರು.
ಭಾರತ ಮತ್ತು ಬ್ರೆಜಿಲ್ ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ನೀಡಿ ಎಂದು ರಷ್ಯಾ ದೇಶ ಶಿಫಾರಸು ಮಾಡಿದರೆ ಚೀನಾ ಮಾತ್ರ ಕ್ಯಾತೆ ತೆಗೆದಿದ್ದು, ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಗೆಂಗ್ ಶೌಂಗ್, ಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಸುಧಾರಣೆ ವಿಷಯದಲ್ಲಿ ಭಿನ್ನ ನಿಲುವನ್ನು ತಳೆದಿವೆ. ಹೀಗಾಗಿ ಈ ವಿಚಾರದಲ್ಲಿ ಪ್ರಪಂಚದ ಎಲ್ಲಾ ರಾಷ್ಟ್ರಗಳು ತಮ್ಮದೇ ಆದ ನಿಲುವು ಹೊಂದಿದ್ದು ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯಬೇಕು ಎಂದು ಚೀನಾ ಹೇಳಿದೆ.