ವಾಷಿಂಗ್ಟನ್, ಜ.18 (Daijiworld News/PY) : ಭಾರತೀಯ ಮೂಲದ ಅಮೆರಿಕ ಉದ್ಯಮಿ ಅನಿಲ್ ಶ್ರೀವತ್ಸ ಅವರು ಅಂಗಾಂಗ ದಾನದ ಮಹತ್ವ ಸಾರುವ ಸಲುವಾಗಿ 400 ದಿನಗಳಲ್ಲಿ 43 ದೇಶ ಸುತ್ತುವ ಮೂಲಕ 73 ಸಾವಿರ ಜನರ ಜೊತೆ ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಅರಿವು ಮೂಡಿಸಿರುವುದಾಗಿ ವರದಿ ತಿಳಿಸಿದೆ.
2014ರಲ್ಲಿ ಅನಿಲ್ ಶ್ರೀವತ್ಸ ಅವರು ತನ್ನ ಒಂದು ಕಿಡ್ನಿಯನ್ನು ಸಹೋದರನಿಗೆ ನೀಡಿದ ಬಳಿಕ ಅನಿಲ್ ಶ್ರೀವತ್ಸ ಅವರು 'ಗಿಫ್ಟ್ ಆಫ್ ಲೈಫ್ ಅಡ್ವೆಂಚರ್' ಅನ್ನು ಪ್ರಾರಂಭಿಸಿದ್ದರು. ಹಾಗಾಗಿ ಇದರ ಮೂಲಕ ಜಗತ್ತಿನಾದ್ಯಂತ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಬೇಕೆಂಬ ಆಶಯ ಶ್ರೀವತ್ಸ ಅವರದ್ದು ಎಂದು ವರದಿ ತಿಳಿಸಿದೆ.
ನಾನು ನನ್ನ ಸಹೋದರನಿಗಾಗಿ ಅಂಗಾಂಗ ದಾನ ಮಾಡಲು ಪ್ರೀತಿಯೊಂದೇ ಕಾರಣ. ನನ್ನ ಅಭಿಪ್ರಾಯದ ಪ್ರಕಾರ, ಇನ್ನೊಬ್ಬರಿಗೆ ಅಂಗಾಂಗ ದಾನ ಮಾಡಬೇಕಿದ್ದರೆ ಪ್ರೀತಿಯೇ ಕಾರಣವಾಗುತ್ತದೆ. ನಿಮಗೆ ವೈಯಕ್ತಿಕವಾಗಿ ತಿಳಿದಿರುವವರನ್ನು ಪ್ರೀತಿಸುವುದು ಅಥವಾ ಅಗತ್ಯವಿರುವ ಯಾವುದೇ ವ್ಯಕ್ತಿಗಳಿಗೆ ಸಹಾಯ ಮಾಡಲು ಪ್ರೀತಿಯಿಂದ ಮಾತ್ರವೇ ಸಾಧ್ಯ ಎಂದು ಶ್ರೀವತ್ಸ ಅವರು ತಿಳಿಸಿದ್ದಾರೆ.
ಶ್ರೀವತ್ಸ ದಂಪತಿ ಅವರು ಕಳೆದ 400 ದಿನಗಳಲ್ಲಿ 100,000 ಲಕ್ಷ ಕಿಲೋ ಮೀಟರ್ ಸಂಚರಿಸಿ 43 ದೇಶಗಳಿಗೆ ತೆರಳಿ 73 ಸಾವಿರ ಜನರನ್ನು ಭೇಟಿ ಮಾಡಿ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವನ್ನು ಮೂಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಶ್ರೀವತ್ಸ ಅವರ ಈ ಕಾರ್ಯಕ್ಕೆ ಅವರ ಪತ್ನಿ ದೀಪಾಲಿ ಕೂಡಾ ಕೈಜೋಡಿಸಿದ್ದು, ತಾವೇ ಅಡುಗೆ ಮಾಡಿಕೊಳ್ಳುತ್ತಾ ಕಾರಿನಲ್ಲಿ ಪ್ರಯಾಣಿಸುವ ದಂಪತಿಗಳಿಗೆ ಸ್ಥಳೀಯರು ಆಹಾರ ನೀಡಿದರೆ ಅದನ್ನು ಸ್ವೀಕರಿಸುತ್ತಾ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು ಎಂದು ವರದಿ ತಿಳಿಸಿದೆ.
ಅನಿಲ್ ಶ್ರೀವತ್ಸ ಅವರು ಕಿಡ್ನಿ ದಾನದ ಮಹತ್ವ, ಅದರ ಕುರಿತಾದ ಕಾನೂನು ಹಾಗೂ ವಿವರಗಳನ್ನು ಶಾಲಾ, ಕಾಲೇಜುಗಳಲ್ಲಿ, ರೋಟರಿ ಕ್ಲಬ್ಸ್, ಕಮ್ಯುನಿಟಿ ಸೆಂಟರ್ಸ್ ಹಾಗೂ ಕಚೇರಿಗಳಲ್ಲಿ ಮಾತನಾಡಿದ್ದಾರೆ ಎಂದು ವರದಿ ತಿಳಿಸಿದೆ.