ಬೀಜಿಂಗ್, ಜ.20 (Daijiworld News/PY) : ಚೀನಾದ ಹಲವು ಭಾಗಗಳಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ ಕೊರೋನಾ ವೈರಸ್ಗೆ ಭಾರತ ಮೂಲದ ಶಿಕ್ಷಕಿಯೊಬ್ಬರು ತುತ್ತಾಗಿದ್ದು, ಚೀನಾದಲ್ಲಿನ ಹೊಸ ಮಾದರಿಯ ಸೋಂಕು ತಗುಲಿದ ಮೊದಲ ವಿದೇಶಿ ಪ್ರಜೆಯಾಗಿದ್ದಾರೆ ಎನ್ನಲಾಗಿದೆ.
ವೈರಸ್ಗೆ ತುತ್ತಾದವರು ಪ್ರೀತಿ ಮಹೇಶ್ವರಿ ಎಂದು ತಿಳಿದುಬಂದಿದೆ. ಚೀನಾದ ಶೆನ್ಜೆನ್ನಲ್ಲಿರುವ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಿ ಮಹೇಶ್ವರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೊಂದು ಸಾರ್ಸ್ ಮಾದರಿಯ ವೈರಸ್ ಎಂದು ವೈದ್ಯ ಸಮುದಾಯ ತಿಳಿಸಿದೆ. 2002-2003ರಲ್ಲಿ ಹಾಂಕಾಂಗ್ ಹಾಗೂ ಚೀನಾದಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು 650ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪ್ರೀತಿ ಮಹೇಶ್ವರಿ ಅವರು ಹೊಸದಿಲ್ಲಿ ಮೂಲದ ಉದ್ಯಮಿ ಅಶುಮಾನ್ ಖೋವಾಲ್ ಎಂಬವರ ಪತ್ನಿ. ವೈರಸ್ಗೆ ತುತ್ತಾದ ಪತ್ನಿಯನ್ನು ನೋಡಲು ಖೋವಾಲ್ಗೆ ಕೆಲ ಹೊತ್ತು ಅವಕಾಶ ನೀಡಲಾಗಿದ್ದು, ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೊಸದಾಗಿ 17 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಒಟ್ಟಾರೆ 62ಕ್ಕೇರಿದಂತಾಗಿದೆ.
ಈ ಪೈಕಿ 19 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಭಾರತದ 500 ಮಂದಿ ವುಹಾನ್ನ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಹೊಸ ಸೋಂಕಿನ ವೈರಸ್ಗೆ ‘2019 ನೋವೆಲ್ ಕೊರೋನಾ ವೈರಸ್ಎಂದು ಹೆಸರಿಸಲಾಗಿದೆ. ಹಿಂದಿನ ಸಂದರ್ಭದಲ್ಲಿ ಇಂತಹ ವೈರಸ್ ಮಾನವನಿಗೆ ಬಾಧಿಸಿದ ನಿದರ್ಶನಗಳಿಲ್ಲ ಎಂದು ಹೇಳಲಾಗಿದೆ.
ಈ ಹೊಸ ಮಾದರಿಯ ವೈರಸ್ನಲ್ಲಿ ಜ್ವರ, ಕೆಮ್ಮು, ಉಸಿರಾಡಲು ತೊಂದರೆ, ನ್ಯುಮೋನಿಯಾ, ಕಿಡ್ನಿ ವೈಫಲ್ಯವು ಸಾಮಾನ್ಯ ಲಕ್ಷಣವಾಗಿದೆ.
2019ರ ಡಿ.8ರಲ್ಲಿ ಈ ವೈರಸ್ ಶುರುವಾಗಿದ್ದು, ಚೀನಾದ ವುಹಾನ್ ನಗರದಲ್ಲಿ ವ್ಯಕ್ತಿ ನ್ಯುಮೋನಿಯಾ ಇದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದಿದ್ದು, ಕೆಲವೇ ದಿನಗಳಲ್ಲಿ ಇದೇ ಮಾದರಿಯ ಸಮಸ್ಯೆಗಳನ್ನು ಹೇಳಿಕೊಂಡು ಚಿಕಿತ್ಸೆಗಾಗಿ ಬಂದಿದ್ದರು.
ಜ.7ರಂದು ಈ ವೈರಸ್ ಅನ್ನು 2019-ಎನ್ಸಿಒವಿ ವೈರಸ್ ಎಂದು ಹೆಸರಿಸಲಾಗಿದ್ದು, ಇದರ ಮೂಲ ಇನ್ನೂ ಪತ್ತೆಯಾಗಿಲ್ಲ. ಈ ವೈರಸ್ಗೆ ಈಗಾಗಲೇ ಇಬ್ಬರು ಅಸುನೀಗಿದ್ದಾರೆ.