ಬೀಜಿಂಗ್, ಜ.22 (Daijiworld News/PY) : ಚೀನಾದಲ್ಲಿ ಕಾಣಿಸಿಕೊಂಡಿರುವ ಸಾರ್ಸ್ ರೀತಿಯ ವೈರಸ್ ಸುಮಾರು 440 ಮಂದಿಯಲ್ಲಿ ಪತ್ತೆಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ವುಹಾನ್ ನಗರದಲ್ಲಿ ಮೊದಲು ಪತ್ತೆಯಾಗಿದ್ದ ಈ ವೈರಸ್ ದೇಶದ ಇತರ ಭಾಗದಲ್ಲೂ ಹಬ್ಬುತಿದೆ. ಈ ವೈರಸ್ ಅನ್ನು ಕೊರೊನಾ ವೈರಸ್ ಎಂದು ಗುರುತಿಸಲಾಗಿದ್ದು, ಜ್ವರ, ಕೆಮ್ಮು, ನ್ಯೂಮೋನಿಯಾ, ಉಸಿರಾಟದ ತೊಂದರೆಯಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಹೊಸ ರೀತಿಯ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಕೊರೊನಾವೈರಸ್ನಿಂದಾಗಿ ನಾಗರಿಕರು ಆತಂಕಗೊಂಡಿದ್ದಾರೆ. ಈ ವೈರಸ್ನಿಂದ ಹೊಸದಾಗಿ 80 ಪ್ರಕರಣಗಳು ದೃಢಪಟ್ಟಿದ್ದು, ಹುಬೈ ಪ್ರಾಂತ್ಯದ ವುಹಾನ್, ಬೀಜಿಂಗ್, ಶಾಂಘೈನಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
2002 ಹಾಗೂ 2003ರಲ್ಲಿ ಚೀನಾ ಮತ್ತು ಹಾಂಗ್ಕಾಂಗ್ನಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್ ವೈರಸ್ಗೆ ಸುಮಾರು 650 ಮಂದಿ ಮೃತಪಟ್ಟಿದ್ದರು. ಈಗ ಹೊಸದಾಗಿ ಪತ್ತೆಯಾದ ಕೊರೊನಾವೈರಸ್ ಕೂಡಾ ಇದೇ ರೀತಿಯ ಹೋಲಿಕೆಯನ್ನು ಹೊಂದಿದ್ದು, ಜನರಲ್ಲಿ ಆತಂಕ ಸೃಷ್ಠಿಸಿದೆ.
ವೈರಸ್ ಕಾಣಿಸಿಕೊಂಡವರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದ್ದು, ವುಹಾನ್ ನಗರದಲ್ಲಿರುವ ಪ್ರವಾಸಿಗರ ಮೇಲೆಯೂ ನಿರ್ಬಂಧ ಹೇರಲಾಗಿದೆ. ವಿಮಾನ, ರೈಲ್ವೆ ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ.
ಥಾಯ್ಲೆಂಡ್, ಜಪಾನ್ ಹಾಗೂ ದಕ್ಷಿಣ ಕೊರಿಯಾದಲ್ಲೂ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಹಲವು ರಾಷ್ಟ್ರಗಳು ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿವೆ. ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಎಚ್ಚರವಹಿಸಲಾಗಿದ್ದು, ಪ್ರಯಾಣಿಕರ ಸಮಗ್ರ ತಪಾಸಣೆ ಮಾಡಲಾಗುತ್ತಿದೆ.
24 ಗಂಟೆಗಳ ಕಾಲ ಜ್ವರದ ಲಕ್ಷಣವಿರುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗುತ್ತಿದೆ. ಹಾಂಕ್ಕಾಂಗ್ನಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದ್ದು, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ, ಸಿಂಗಪುರ ಹಾಗೂ ಅಮೆರಿಕದಲ್ಲಿಯೂ ತಪಾಸಣೆ ಕ್ರಮಗಳನ್ನು ಹೆಚ್ಚಿಸಲಾಗಿದೆ.
ಫಿಲಿಫೈನ್ಸ್ನಲ್ಲಿ ಕಾಣಿಸಿಕೊಂಡಿರುವ ಸಾರ್ಸ್ ರೀತಿಯ ವೈರಸ್ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ವೈರಸ್ ಕಾಣಿಸಿಕೊಂಡ ಚೀನಾದ ವುಹಾನ್ ನಗರದಿಂದ ಜ.12ರಂದು ಫಿಲಿಫೈನ್ಸ್ಗೆ ಬಂದಿರುವ 5 ವರ್ಷದ ಬಾಲಕನಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಈತ ಜ್ವರದಿಂದ ಬಳಲುತ್ತಿದ್ದಾನೆ. ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಫ್ರಾನ್ಸಿಸ್ಕೊ ಡುಕ್ಯೂ ತಿಳಿಸಿದ್ದಾರೆ.
ಪ್ರಾಣಿಗಳು ಹಾಗೂ ಜನರ ನಡುವೆ ಕೊರೊನೊವೈರಸ್ ಹರಡುತ್ತದೆ. ಸೋಂಕು ಕಾಣಿಸಿಕೊಂಡ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಹಾಗೂ ಸ್ಪರ್ಶಿಸಿದಾಗ ಇನ್ನೊಬ್ಬರಿಗೆ ಹರಡುತ್ತದೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ.
ಚೀನಾದಿಂದ ಭಾರತಕ್ಕೆ ಬರುವ ಪ್ರವಾಸಿಗರ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಹಾಗೂ ಕೋಲ್ಕತ್ತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್ಗಳ ಮೂಲಕ ತಪಾಸಣೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ನಿರ್ದೇಶನ ನೀಡಿದೆ.