ಬೀಜಿಂಗ್, ಜ 24 (Daijiworld News/MB) : ಚೀನಾದಲ್ಲಿ ಕೊರೋನಾ ವೈರಸ್ ಸೋಂಕು ಹರಡುತ್ತಲ್ಲೇ ಇದ್ದು ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು ಈ ವೈರಸ್ ಸೋಂಕು 830 ಜನರಲ್ಲಿ ಕಂಡುಬಂದಿದೆ ಎಂದು ಚೀನಾ ಸರ್ಕಾರ ತಿಳಿಸಿದೆ. ಈ ವೈರಸ್ ಮೊದಲ ಬಾರಿಗೆ ವುಹಾನ್ ನಗರದಲ್ಲಿ ಪತ್ತೆಯಾಗಿದ್ದು ಆ ನಗರದಲ್ಲೇ 1,072 ಮಂದಿಗೆ ಈ ಸೋಂಕು ತಗಲಿದೆ ಎಂದು ಶಂಕೆಯಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಈ ವೈರಸ್ ಕಂಡು ಬಂದಿರುವ 830 ಮಂದಿಗಳ ಪೈಕಿ 177 ಜನರ ಸ್ಥಿತಿ ಚಿಂತಾಜನಕವಾಗಿದೆ. ಈ ವೈರಸ್ ತಗಲಿದ್ದ ಸಾವಿನಂಚಿನಲ್ಲಿದ್ದ 34 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಈ ವೈರಸ್ ವ್ಯಾಪಕವಾಗಿ ಹರಡುತ್ತಲ್ಲೇ ಇರುವ ಹಿನ್ನಲೆಯಲ್ಲಿ ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ. ಚೀನಾದಲ್ಲಿ ಶನಿವಾರದಿಂದ ಹೊಸ ವರ್ಷದ ಸಂಭ್ರಮ ಆರಂಭವಾಗಲಿದ್ದು ವಿದೇಶಗಳಲ್ಲಿ ಇರುವ ಲಕ್ಷಾಂತರ ಚೀನಾ ಪ್ರಜೆಗಳು ಚೀನಾಕ್ಕೆ ಬರಲಿದ್ದು ಆರೋಗ್ಯಧಿಕಾರಿಗಳಿಗೆ ಆತಂಕ ಉಂಟಾಗಿದೆ.
ಈ ಹಿನ್ನಲೆಯಲ್ಲಿ ವುಹಾನ್ ಹಾಗೂ ಹುವಾನ್ಗಾಂಗ್ ನಗರಗಳಿಂದ ವಿಮಾನ, ರೈಲು ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು ಜನರು ವಿಶೇಷ ಕಾರಣಗಳು ಇಲ್ಲದೇ ನಿರ್ಗಮಿಸಬಾರದು ಎಂದು ಸೂಚನೆ ನೀಡಲಾಗಿದೆ.
ಹಾಗೆಯೇ ವಾಣಿಜ್ಯ ಚಟುವಟಿಕೆಗಳೂ ಕುಗ್ಗಿದ್ದು ಸಿನಿಮಾ ಮಂದಿರ, ಇಂಟರ್ನೆಟ್ ಕೆಫೆಗಳು ಬಂದ್ ಆಗಿದೆ. ಎಜೈ ನಗರದಲ್ಲಿಯೂ ಮುಂಜಾಗ್ರತೆಯಾಗಿ ರೈಲು ಸಂಚಾರ ನಿರ್ಬಂಧ ಮಾಡಲಾಗಿದೆ. ಬೇಜಿಂಗ್ನಲ್ಲಿ ಹೆಚ್ಚಿನ ಜನರು ಒಂದು ಕಡೆಯಲ್ಲಿ ಗುಂಪು ಕೂಡದಂತೆ ನಿರ್ಬಂಧಿಸಿ ಸರಕಾರ ಆದೇಶ ಹೊರಡಿಸಿದೆ.