ದಾವೋಸ್, ಜ.24 (Daijiworld News/PY): "ಭಾರತದಲ್ಲಿ ಆರ್ಥಿಕ ಬೆಳವಣಿಗೆ ದರ ಕುಸಿತಗೊಂಡಿರುವುದು ತಾತ್ಕಾಲಿಕವಾದುದು. ಇದು ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿದೆ" ಎಂದು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜೋರ್ಜಿವಾ ಹೇಳಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಾತನಾಡಿದ ಅವರು, "ಐಎಂಎಫ್ 2019ರ ಅಕ್ಟೋಬರ್ನಲ್ಲಿ ಪ್ರಕಟಿಸಿದ್ದ ಜಾಗತಿಕ ಆರ್ಥಿಕತೆಯ ಮುನ್ನೋಟಕ್ಕೆ ಹೋಲಿಕೆ ಮಾಡಿದರೆ 2020ರ ಜನವರಿಯಲ್ಲಿನ ಪರಿಸ್ಥಿತಿ ಸುಧಾರಿಸಿದೆ ಅಮೇರಿಕಾ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರ ಕೊನೆಗೊಳಿಸುವ ಸಲುವಾಗಿ ಪ್ರಥಮ ಹಂತದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ಜಾಗತಿಕ ಆರ್ಥಿಕತೆಯ ಪಾಲಿಗೆ ಉತ್ತಮವಾಗಿದೆ" ಎಂದರು.
"ಶೇ 3.3ರಷ್ಟು ಜಾಗತಿಕ ಆರ್ಥಿಕತೆಯ ಪ್ರಗತಿ ದಾಖಲಿಸುವುದು ಉತ್ತಮ ವಿಷಯವಲ್ಲ. ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಇಳಿಮುಖವಾಗಿದೆ. ಎಲ್ಲವೂ ಮುಂದಿನ ದಿನಗಳಲ್ಲಿ ಸರಿಯಾಗಲಿದೆ. ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ಪ್ರಗತಿ ದರ ಸುಧಾರಣೆಯಾಗಿದೆ. ಇದು ಉತ್ತಮ ಬೆಳವಣಿಗೆ. ಇತರೆ ಎಲ್ಲಾ ರಾಷ್ಟ್ರಗಳಲ್ಲಿಯೂ ಇದೇ ರೀತಿ ಆಗುವ ನಿರೀಕ್ಷೆ ಇದೆ" ಎಂದು ತಿಳಿಸಿದರು.