ಇಸ್ತಾಂಬುಲ್, ಜ 25 (Dajiworld News/MB) : ಪೂರ್ವ ಟರ್ಕಿಯ ಎಲಾಜಿಂಗ್ ಪ್ರಾಂತ್ಯದಲ್ಲಿ ಶನಿವಾರ ಬೆಳಗ್ಗಿನ ಜಾವ ಭಾರೀ ಭೂಕಂಪವಾಗಿದ್ದು 20 ಮಂದಿ ಮೃತಪಟ್ಟಿದ್ದು 600 ಮಂದಿ ಗಾಯಗೊಂಡಿದ್ದಾರೆ.
ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7ರಷ್ಟು ದಾಖಲಾಗಿದ್ದು ಪೂರ್ವ ಪ್ರಾಂತ್ಯದ ಸಿವ್ರೈಸ್ನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರ ಬಿಂದುವಿತ್ತು ಎಂದು ವಿಪತ್ತು ಮತ್ತು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ.
ಮೃತರಲ್ಲಿ 13 ಮಂದಿ ಎಲಾಜಿಂಗ್ ಪ್ರಾಂತ್ಯದವರು, ನಾಲ್ವರು ಮಾಲಟ್ಯ, ಇಬ್ಬರು ದಿಯರ್ಬಕೀನ್ನವರಾಗಿದ್ದಾರೆ. ಈ ಭೂಕಂಪದಿಂದಾಗಿ ಹತ್ತಕ್ಕು ಅಧಿಕ ಕಟ್ಟಡಗಳು ಧರೆಗುರುಳಿದ್ದು ಕಟ್ಟಡದ ಅವಶೇಷದಡಿ ಸಿಳುಕಿರುವವರ ರಕ್ಷಣೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಶೋಧ ಕಾರ್ಯಗಳು ನಡೆಯುತ್ತಿದ್ದು ಎಲಾಜಿಂಗ್ ನಗರದ 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ರಾತ್ರಿ ವೇಳೆ ತಾಪಮಾನ ಕಡಿಮೆಯಾಗುವ ಹಿನ್ನಲೆಯಲ್ಲಿ ಜನರಿಗೆ ತಾತ್ಕಾಲಿಕವಾಗಿ ಟೆಂಟ್, ಹಾಸಿಗೆ, ರಗ್ಗುಗಳ ವ್ಯವಸ್ಥೆ ಮಾಡಲಾಗಿದ್ದು ಮನೆಗಳಿಂದ ಹೊರಕ್ಕೆ ಓಡಿ ಬಂದು ಪ್ರಾಣ ಉಳಿಸಿಕೊಂಡ ಜನರು ಚಳಿ ತಡೆಯಲಾರದೆ ಬೀದಿಯಲ್ಲೇ ಬೆಂಕಿ ಕಾಯಿಸಿಕೊಳ್ಳುತ್ತಾ ಚಳಿ ನಿಯಂತ್ರಣಕ್ಕೆ ತರುತ್ತಿದ್ದಾರೆ.
ಪಶ್ಚಿಮ ಟರ್ಕಿಯಲ್ಲಿ 1999ರಲ್ಲಿ 7.6 ತೀವ್ರತೆಯ ಭೂಕಂಪವಾಗಿದ್ದು 17 ಸಾವಿರಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 5 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. ಹಾಗೆಯೇ 2011ರಲ್ಲಿಯೂ ಪೂರ್ವ ಟರ್ಕಿಯ ವ್ಯಾನ್ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಭೂಕಂಪದಲ್ಲಿ ಜೀವಕಳೆದುಕೊಂಡವರಿಗೆ ದೇವರು ಕರುಣೆ ಸಿಗಲಿ ಮತ್ತು ಘಟನೆಯಲ್ಲಿ ಗಾಯಗೊಂಡರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.