ದಾವೋಸ್, ಜ.25 (Daijiworld News/PY) : ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ -2019ರ ಪಟ್ಟಿಯಲ್ಲಿ ಭಾರತಕ್ಕೆ 80ನೇ ಸ್ಥಾನ ದೊರಕಿದ್ದು, ಪಾಕಿಸ್ತಾನಕ್ಕೆ 120ನೇ ಸ್ಥಾನದಲ್ಲಿದೆ. ಈ ಪಟ್ಟಿಯನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಭಾರತವು 2 ಸ್ಥಾನ ಕುಸಿತ ಕಂಡಿದೆ.
ದಾವೋಸ್ನಲ್ಲಿ ವಿಶ್ವ ಆರ್ಥಿಕ ವೇದಿಕೆ ಆಯೋಜಿಸಿದ್ದ ಸಮಾವೇಶದಲ್ಲಿ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ -2019ರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 180 ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 100 ಅಂಕಗಳಲ್ಲಿ ಭಾರತವು 41 ಅಂಕ ಗಳಿಸಿದ್ದು, 80ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಭಾರತವು 78ನೇ ಸ್ಥಾನವನ್ನು ಪಡೆದುಕೊಂಡಿತ್ತು.
ಈ ವರದಿಯನ್ನು ಜರ್ಮನಿಯ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಸರ್ಕಾರೇತರ ಸಂಸ್ಥೆ ಸಿದ್ದಪಡಿಸುತ್ತದೆ. ಇದರಲ್ಲಿ ಸಾರ್ವಜನಿಕ ವಲಯದಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತಾಗಿ ಸಮೀಕ್ಷೆ ಮಾಡಿ, ಸಮೀಕ್ಷೆಯ ಆಧಾರದ ಮೇಲೆ ರ್ಯಾಂಕ್ ಕೊಡಲಾಗುತ್ತದೆ.
ಈ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ಹಾಗೂ ಡೆನ್ಮಾರ್ಕ್ 87 ಅಂಕಗಳನ್ನು ಗಳಿಸಿಕೊಂಡು ಮೊದಲ ಸ್ಥಾನ ಪಡೆದುಕೊಂಡಿವೆ. ಉಳಿದಂತೆ ಸಿರಿಯಾ, ದಕ್ಷಿಣ ಸುಡಾನ್, ಸೊಮಾಲಿಯಾ ತಲಾ 13, 12 ಹಾಗೂ 9 ಅಂಕಗಳನ್ನು ಗಳಿಸಿ ಕೊನೆಯ ಸ್ಥಾನಗಳಲ್ಲಿವೆ.
3ನೇ ಸ್ಥಾನದಲ್ಲಿ ಫಿನ್ಲೆಂಡ್ , 4ರಲ್ಲಿ ಸಿಂಗಪೂರ್ , ಸ್ವೀಡನ್ಗೆ 5 ಹಾಗೂ ಸ್ವಿಟ್ಜರ್ಲೆಂಡ್ಗೆ 6ನೇ ಸ್ಥಾನ ದೊರೆತ್ತಿದ್ದು, ವಿಶ್ವದ ಭ್ರಷ್ಟಾಚಾರ ರಹಿತ ದೇಶಗಳೆಂಬ ಖ್ಯಾತಿ ಗಳಿಸಿವೆ. ವೆನುಜುವೆಲ್ಲಾ, ಯೆಮನ್, ಸಿರಿಯಾ, ದಕ್ಷಿಣ ಸುಡಾನ್, ಸೊಮಾಲಿಯಾ ಕೊನೆಯ 6ನೇ ಸ್ಥಾನದಲ್ಲಿವೆ.
ಭಾರತವು 2016ರಲ್ಲಿ 176 ರಾಷ್ಟ್ರಗಳ ಪೈಕಿ 79ನೇ ಸ್ಥಾನ ಪಡೆದುಕೊಂಡಿತ್ತು. 2017ರಲ್ಲಿ 2 ಸ್ಥಾನ ಕುಸಿತ ಕಂಡು 81ನೇ ಸ್ಥಾನಕ್ಕೆ ಇಳಿದಿತ್ತು. 2018ರಲ್ಲಿ 3 ಸ್ಥಾನಗಳ ಸುಧಾರಣೆ ಕಂಡು 78ನೇ ಸ್ಥಾನಕ್ಕೆ ಏರಿತ್ತು. ಇದೀಗ ಮತ್ತೆ 2 ಸ್ಥಾನ ಕುಸಿದಿದ್ದು 80ನೇ ಸ್ಥಾನಕ್ಕೆ ಕುಸಿದಿದೆ.