ಬೀಜಿಂಗ್, ಫೆ.03 (Daijiworld News/PY) : ಚೀನಾದಲ್ಲಿ ಕೊರೋನಾ ವೈರಸ್ಗೆ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ಸಾವಿನ ಸಂಖ್ಯೆ 360ಕ್ಕೇರಿದೆ. ಚೀನಾದಿಂದ ಫಿಲಿಫೈನ್ಸ್ಗೆ ತೆರಳಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಕೊರೋನಾ ವೈರಸ್ನಿಂದ ವಿದೇಶದಲ್ಲಾದ ಮೊದಲ ಸಾವು ಇದಾಗಿದೆ.
ಕೊರೋನಾ ವೈರಸ್ ಭಾರತ, ಅಮೆರಿಕ, ಯುಕೆ, ರಷ್ಯಾ ಸೇರಿದಂತೆ 25 ರಾಷ್ಟ್ರಗಳಲ್ಲಿ ಪಸರಿಸಿದ್ದು, ಚೀನಾದಲ್ಲಿ ಸೋಂಕಿತರ ಸಂಖ್ಯೆ 14 ಸಾವಿರ ದಾಟಿದೆ. ಇದೇ ವೇಳೆ ಕೋರೋನಾ ವೈರಸ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಗಳನ್ನು ಮಾಡದಂತೆ ಕುಟುಂಬಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಫೆ.2 ಭಾನುವಾರದಂದು ಯುಎಇಯಲ್ಲಿ ಮತ್ತೊಂದು ಕೊರೊನಾವೈರಸ್ ಪ್ರಕರಣ ಪತ್ತೆಯಾಗಿದ್ದು, ಕೊರೋನಾ ವೈರಸ್ ಇದೆ ಎಂಬ ಮಾಹಿತಿ ಖಚಿತವಾದವರ ಸಂಖ್ಯೆ 5ಕ್ಕೇರಿದೆ. ವುಹಾನ್ನಿಂದ ಬಂದ ವ್ಯಕ್ತಿಯೋರ್ವನಿಗೆ ಸೋಂಕು ಕಂಡುಬಂದಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಸೆಂಟ್ರಲ್ ಬ್ಯಾಂಕ್ 173 ಶತಕೋಟಿ ಡಾಲರ್ ಮೊತ್ತ ನೆರವನ್ನು ಘೋಷಿಸಿದ್ದು, ಕರೆನ್ಸಿ ಮಾರುಕಟ್ಟೆಯನ್ನು ಸ್ಥಿರವಾಗಿಡಲು ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣಕಾಸು ಹರಿದಾಡುತ್ತಿರಲಿ ಎಂಬ ಉದ್ದೇಶದಿಂದ ಈ ಘೋಷಣೆ ಮಾಡಲಾಗಿದೆ. ಅಲ್ಲದೇ, ವೈರಸ್ಗೆ ಕಡಿವಾಣ ಹಾಕುವ ಸಲುವಾಗಿ ನೆರವಾಗಿರುವಂಥ ಮೆಡಿಕಲ್ ಕಂಪೆನಿಗಳು ಎಲ್ಲಾ ರೀತಿಯ ಸಂಸ್ಥೆಗಳಿಗೂ ಹಣಕಾಸಿನ ಸಹಾಯ ಮಾಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಚೀನಾದ ಕೆಲವು ನಗರಗಳೂ ಈಗ ಶಟ್ಡೌನ್ ಮಾಡಲಾಗಿದೆ. ಭಾನುವಾರ ಈ ನಗರದ ಎಲ್ಲ ರಸ್ತೆಗಳನ್ನೂ ಮುಚ್ಚಲಾಗಿದ್ದು, ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಬೇಕಾದರೆ, 2 ದಿನಕ್ಕೊಮ್ಮೆ ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರವೇ ಹೊರವರುವಂತೆ ಅನುಮತಿ ನೀಡಲಾಗಿದೆ. 90 ಲಕ್ಷ ಜನಸಂಖ್ಯೆಯಿರುವ ಈ ನಗರದ 46 ಹೆದ್ದಾರಿಯ ಟೋಲ್ಗಳನ್ನೂ ಮುಚ್ಚಲಾಗಿದೆ.
ಫೆ.2 ಶನಿವಾರದಂದು ಚೀನಾದಿಂದ ಭಾರತಕ್ಕೆ ಬಂದ ಹರ್ಯಾಣದ ಮಾನೇಸರ್ನಲ್ಲಿನ ನಿಗಾ ಕೇಂದ್ರ ತಲುಪಿರುವ 300ರಷ್ಟು ಭಾರತೀಯರು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋವು ವೈರಲ್ ಆಗಿದೆ. ಮೂರು ಹಂತದ ಮಾಸ್ಕ್ಗಳನ್ನು ಧರಿಸುವಂತೆ ಅವರಿಗೂ ಸೂಚಿಸಲಾಗಿದೆ. 2 ವಾರಗಳ ಕಾಲ ಅವರು ತೀವ್ರ ನಿಗಾದಲ್ಲಿ ಇರಲಿದ್ದು, ಅಲ್ಲಿಯವರೆಗೂ ಅವರು ಕುಟುಂಬದ ಯಾರೊಬ್ಬರನ್ನೂ ಸಂಪರ್ಕಿಸುವಂತಿಲ್ಲ. ಆದರೂ, ಅಲ್ಲಿರುವ ವಿದ್ಯಾರ್ಥಿಗಳು ಹಾಡು ಹಾಡುತ್ತಾ, ಕುಣಿಯುತ್ತಾ ಸಂಭ್ರಮಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚೀನಾದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ದಾಖಲಿಸಿಕೊಳ್ಳಲು ಚೀನಾದಲ್ಲಿ ಮತ್ತೊಂದು ನೂತನ ಆಸ್ಪತ್ರೆಯನ್ನು ಕೇವಲ 10 ದಿನಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ವುಹಾನ್ ನಗರದಲ್ಲಿ ಫೀಲ್ಡ್ ಹಾಸ್ಪಿಟಲ್ ಸಿದ್ಧವಾಗಿದ್ದು, ಇದರ ಮೇಲ್ವಿಚಾರಣೆಯನ್ನು ಸೇನೆಯೇ ವಹಿಸಿಕೊಂಡಿದೆ. ಒಂದು ಸಾವಿರ ಹಾಸಿಗೆಗಳುಳ್ಳ ಆಸ್ಪತ್ರೆಯಲ್ಲಿ 1,400 ಸೇನಾ ವೈದ್ಯರನ್ನು ನಿಯೋಜಿಸಲಾಗಿದೆ.