ಬೀಜಿಂಗ್, ಫೆ 03 (Daijiworld News/MB) : ಕೊರೋನಾ ವೈರಸ್ ಎಲ್ಲೆಡೆ ಹರಡುತ್ತಿರುವ ಹಿನ್ನಲೆಯಲ್ಲಿ ಚೀನಾ ಸರ್ಕಾರವು ಹಲವಾರು ಮುಂಜಾಗ್ರತ ಕ್ರಮಗಳನ್ನು ತೆಗೆದು ಕೊಳ್ಳುತ್ತಿದ್ದು ಅದರ ಭಾಗವಾಗಿ ಜನರಿಗೆ ಮುಖವಾಡ (ಮಾಸ್ಕ್) ಧರಿಸಲು ನೆನಪಿಸಲು ಡ್ರೋನ್ಗಳನ್ನು ಬಳಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಅಧಿಕಾರಿಗಳು ಜನರಿಗೆ ಮುಖವಾಡ ಧರಿಸಲು ನೆನಪಿಸಲು ಆಡಿಯೋ ಸಾಮರ್ಥ್ಯವುಳ್ಳ ಡ್ರೋನ್ಗಳನ್ನು ಬಳಸಲಾಗುತ್ತಿದೆ. ಈ ಮೂಲಕ ಯಾರದರೂ ಮುಖವಾಡ ಧರಿಸದಿದ್ದಲ್ಲಿ ಅವರಿಗೆ ಅಧಿಕಾರಿಗಳು ಮುಖವಾಡ ಧರಿಸುವಂತೆ ಎಚ್ಚರಿಸಬಹುದು ಎಂದು ಚೀನಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಈ ಡ್ರೋನ್ನ್ನು ಲಿಯಾನಿಂಗ್ ಪ್ರಾಂತ್ಯದ ಪ್ರಮುಖ ಬಂದರಿನ ಬಳಿಯಿರುವ ಸಣ್ಣ ನಗರವಾದ ಮುಯಾಂಗ್ನಲ್ಲಿನ ಸಂಚಾರಿ ಪೊಲೀಸರು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಈ ಡ್ರೋನ್ ವಿಡಿಯೋದ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿದ್ದು ಜನರು ಮುಖವಾಡ ಧರಿಸದೆ ಬೀದಿಯಲ್ಲಿ ನಡೆಯುತ್ತಿರುವಾಗ "ನಿಮ್ಮ ಮುಖವಾಡ ಎಲ್ಲಿದೆ? ನಿಮ್ಮ ಮುಖವಾಡ ಧರಿಸಿ" ಎಂದು ಎಚ್ಚರಿಸಲಾಗಿದೆ.
ಹಾಗೆಯೇ ವಿವಾಹ ಸಮಾರಂಭದಲ್ಲಿ ಡ್ರೋನ್ ಮೂಲಕ ತೆಗೆಯಲಾದ ವಿಡಿಯೋದಲ್ಲಿ ಛಾಯಾಗ್ರಾಹಕ ಗುವೊ ಜುಂಜಿ ಎಂಬವರು ಮುಖವಾಡ ಧರಿಸದ ಅಜ್ಜಿಗೆ "ಅಜ್ಜಿ ಡ್ರೋನ್ಅನ್ನು ನೋಡುವುದನ್ನು ನಿಲ್ಲಿಸಿ. ಇದು ನಮ್ಮ ಹಳ್ಳಿಯ ಡ್ರೋನ್ ಆಗಿದೆ. ಮುಖವಾಡ ಧರಿಸದೆ ಓಡಾಡಬೇಡಿ, ಬೇಗನೇ ಮನೆಗೆ ಹೋಗಿ ಕೈ ತೊಳೆಯಿರಿ" ಎಂದು ಹೇಳಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಯುವತಿ ಮುಖವಾಡ ಧರಿಸದೆ ಮನೆಯ ಬದಿ ನಡೆಯುತ್ತಿದ್ದಾಗ ಡ್ರೋನ್ ನಿಯಂತ್ರಣ ಮಾಡುತ್ತಿದ್ದ ವ್ಯಕ್ತಿ, "ಹೇ ಮಗು, ನಾವು ಅಸಾಮಾನ್ಯ ಕಾಲದಲ್ಲಿದ್ದೇವೆ. ಹೊರಗೆ ಸುತ್ತಾಡಬೇಡ, ನೀನು ಮುಖವಾಡ ಕೂಡಾ ಧರಿಸಿಲ್ಲ, ಶೀಘ್ರವಾಗಿ ಮನೆಗೆ ಹೋಗು" ಎಂದು ಹೇಳಿದ್ದಾನೆ.
ಹಾಗೆಯೇ ಈ ಬಗ್ಗೆ ಸರ್ಕಾರಿ ಸ್ವಾಮ್ಯದ ಇಂಗ್ಲಿಷ್ ಭಾಷೆಯ ಪತ್ರಿಕೆ ಗ್ಲೋಬಲ್ ಟೈಮ್ಸ್ ಟ್ವೀಟ್ ಮೂಲಕ, "ರಕ್ಷಣೆಗಾಗಿ ಇರುವ ಮುಖವಾಡ ಧರಿಸಿ ಓಡಾಡುತ್ತೀರಾ? ಆದರೆ ಈ ಡ್ರೋನ್ಗಳ ಕಣ್ಣಿಂದ ತಪ್ಪಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.
ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಮನೆಯ ಸುತ್ತಮುತ್ತ ನಡೆಯುವ ಘಟನೆಗಳ ಮೇಲೆ ನಿಗಾ ವಹಿಸಲು ಡ್ರೋನ್ ಬಳಕೆ ಮಾಡಿದ್ದು ಆ ಸಂದರ್ಭದಲ್ಲಿ ಮುಖವಾಡ ಧರಿಸದೆ ಓಡಾಡುವವರಿಗೆ ಎಚ್ಚರ ನೀಡಿದ್ದಾರೆ.