ವುಹಾನ್, ಫೆ 04 (Daijiworld News/MB) : ಪ್ರಪಂಚದಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ನಿಂದಾಗಿ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು ಚೀನಾ ಸರ್ಕಾರ ಅಮೆರಿಕಾದ ನೆರವು ಪಡೆಯಲು ಮುಂದಾಗಿದೆ.
ಸೋಮವಾರ ಒಂದು ದಿನದಲ್ಲೇ 64 ಜನರು ಈ ಸೋಂಕಿನಿಂದಾಗಿ ಬಲಿಯಾಗಿದ್ದು ಒಟ್ಟು ಮೃತರ ಸಂಖ್ಯೆ 425ಕ್ಕೆ ಏರಿದೆ. ಅಷ್ಟು ಮಾತ್ರವಲ್ಲದೇ ಮೃತರಾದ 64 ಜನರು ಕೂಡಾ ಹುಬೈ ಪ್ರಾಂತ್ಯದವರು ಎಂದು ವರದಿಯಾಗಿದೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ್ದು, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಪ್ರಮಾಣ ಮತ್ತಷ್ಟು ಹೆಚ್ಚಾಗಲಿರುವ ಅಪಾಯವಿದೆ ಎಂದು ಅಮೆರಿಕಾದ ವೈದ್ಯಾಧಿಕಾರಿ ಡಾ. ನ್ಯಾನ್ಸಿ ಮೆಶನೇರ್ ತಿಳಿಸಿದ್ದಾರೆ.
ಸುಮಾರು 3,235 ಜನರಿಗೆ ಸೋಮವಾರ ಒಂದೇ ದಿನದಲ್ಲಿ ಸೋಂಕು ತಗಲಿರುವ ಶಂಕೆ ಉಂಟಾಗಿದ್ದು ಸೋಂಕು ತಗಲಿದವರ ಸಂಖ್ಯೆ 20,438ಕ್ಕೆ ಏರಿದೆ. ಕೊರೋನಾ ಪರಿಣಾಮದಿಂದ ಚೀನಾದಲ್ಲಿ ಶೇರು ಮಾರುಕಟ್ಟೆ 8% ಕುಸಿದಿದೆ.
ಚೀನಾ ಹೊರತು ಪಡಿಸಿ ಇತರ 23 ದೇಶಗಳಲ್ಲಿ 151 ಕೊರೋನಾ ಸೋಂಕು ಪ್ರಕರಣ ದಾಖಲಾಗಿದ್ದು, ಭಾರತ, ಅಮೆರಿಕಾ, ಜಪಾನ್, ಥೈಲ್ಯಾಂಡ್, ಹಾಂಕ್ ಕಾಂಗ್ , ಬ್ರಿಟನ್ ಮೊದಲಾದ ದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಭಾರತದ ಹಲವು ಭಾಗಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಮೇರಿಕಾದಲ್ಲಿ ಈಗಾಗಲೇ 11 ಪ್ರಕರಣಗಳು ಪತ್ತೆಯಾಗಿದೆ.