ಬೀಜಿಂಗ್, ಫೆ.06 (Daijiworld News/PY) : ಮಾರಣಾಂತಿಕ ಕೊರೋನಾ ವೈರಸ್ಗೆ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 564ಕ್ಕೆರಿದೆ. ಇಲ್ಲಿಯವರೆಗೆ ಸುಮಾರು 2,987 ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಹುಬೇಯದಲ್ಲಿ ಒಟ್ಟು 19,665 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಫೆ.5 ಬುಧವಾರ ಒಂದೇ ದಿನದಲ್ಲಿ ಸುಮಾರು 73 ಮಂದಿ ಕೊರೋನಾ ವೈರಸ್ಗೆ ಸಾವನ್ನಪ್ಪಿದ್ದು, ಹುಬೇಯ ಪ್ರಾಂತ್ಯದಲ್ಲಿಯೇ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಒಟ್ಟು 28,018 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಚೀನಾದ ಆರೋಗ್ಯ ಸಮಿತಿ ಮಾಹಿತಿ ನೀಡಿದೆ. ಹುಬೇಯದಲ್ಲಿ ಬುಧವಾರ 2,987 ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 19,665 ಮಂದಿಗೆ ಸೊಂಕು ತಗುಲಿದೆ ಎಂದು ದೃಢಪಡಿಸಲಾಗಿದೆ.
ಹುಬೇಯ ಪ್ರಾಂತ್ಯದಲ್ಲಿ ಕೊರೋನಾ ಸೋಂಕು ತಗುಲಿರುವ 14,314 ಮಂದಿಯನ್ನು ಆಸ್ಪತ್ರೆಯ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಅವರಲ್ಲಿ 756 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಜಪಾನ್ ದೇಶದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ 10 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈಗ ಸೋಂಕು ತಗಲಿರುವವರ ಸಂಖ್ಯೆ ಅಧಿಕವಾಗಿದೆ. ಒಟ್ಟು 20 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಡೈಮಂಡ್ ಪ್ರಿನ್ಸೆಸ್ ಹಡಗನ್ನು ಸದ್ಯ ಯಾಕೋಹಾಮಾ ಬಂದರಿನಲ್ಲಿ ನಿಲ್ಲಿಸಲಾಗಿದ್ದು, ಈ ಹಡಗಿನಲ್ಲಿ ಒಟ್ಟು 3,700 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಕೊರೊನಾ ವೈರಸ್ ವಿಶ್ವಾದ್ಯಂತ ಪಸರಿಸುತ್ತಿದ್ದು, ಏಷ್ಯಾ, ಯುರೋಪ್, ಅಮೆರಿಕಾ, ಕೆನೆಡಾದಲ್ಲಿ ಸೋಂಕು ವ್ಯಾಪಿಸಿದೆ. ಇಲ್ಲಿಯವರೆಗೆ ಸುಮಾರು 20 ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.