ಬಿಜೀಂಗ್, ಫೆ.07 (Daijiworld News/PY) : ಕೊರೋನಾ ವೈರಸ್ ಬಗ್ಗೆ ಮೊದಲ ಬಾರಿ ಎಚ್ಚರಿಕೆ ನೀಡಿದ್ದ ಚೀನಿ ವೈದ್ಯರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆತ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
ಲಿ ವೆನ್ಲಿಂಗ್ (34) ಸಾವನ್ನಪಿದ ವೈದ್ಯ. ಲಿ ವೆನ್ಲಿಂಗ್ ಅವರು ವುಹಾನ್ನಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಆಸ್ಪತ್ರೆಗೆ ಬಂದ ಕೆಲವು ರೋಗಿಗಳಲ್ಲಿ 2002-03ರಲ್ಲಿ ಕಂಡು ಬಂದಿದ್ದ ಸಾರ್ಸ್ ರೋಗದ ರೀತಿಯ ಲಕ್ಷಣಗಳು ಇದ್ದವು ಎಂಬ ವಿಚಾರದ ಬಗ್ಗೆ ಇವರು ಮೊದಲ ಬಾರಿಗೆ ಪತ್ತೆ ಹಚ್ಚಿದ್ದರು.
ಡಿ.30ರಂದು ಲಿ ವೆನ್ಲಿಂಗ್ ಅವರು ಈ ವಿಚಾರವಾಗಿ ಸಹೋದ್ಯೋಗಿಗಳಿಗೆ ಸಂದೇಶ ರವಾನಿಸಿದ್ದು, ಸಾರ್ಸ್ ರೋಗದ ಮಾದರಿಯ ಸೋಂಕು ಪತ್ತೆಯಾಗಿದೆ, ಇದರ ಬಗ್ಗೆ ಜನರು ಜಾಗೃತೆ ವಹಿಸಿ, ಮಾಸ್ಕ್ ಧರಿಸಿ ಓಡಾಡುವಂತೆ ಹೇಳಿದ್ದರು. ಆದರೆ ಈ ವಿಚಾರವನ್ನು ನಂಬದ ಜನರು ಈತ ಸುಳ್ಳು ಹೇಳುತ್ತಿದ್ದಾನೆ ಎಂದು ವೈದ್ಯ ಸೇರಿದಂತೆ 8 ಜನರ ವಿರುದ್ದ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.
ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಲಿ ವೆನ್ಲಿಂಗ್ ಅವರು ಕೂಡಾ ಸೋಂಕಿಗೆ ತುತ್ತಾಗಿದ್ದು, ಹುಬೈ ಪ್ರಾಂತ್ಯದ ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ವೈದ್ಯ ಲಿ ವೆನ್ಲಿಂಗ್ ಅವರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
ಈ ವಿಚಾರವಾಗಿ ಹೇಳಿಕೆ ನೀಡಿರುವ ಆಸ್ಪತ್ರೆಯ ಅಧಿಕಾರಿಗಳು, ನಮ್ಮ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಿ ವೆನ್ಲಿಂಗ್ ಅವರು ಕೊರೋನಾ ವೈರಸ್ ತುತ್ತಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಫೆ.7ರ ಮಧ್ಯ ರಾತ್ರಿ 2.58ಕ್ಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.