ನ್ಯೂಯಾರ್ಕ್, ಫೆ.08 (Daijiworld News/PY): 6 ವರ್ಷದ ಗೋಲ್ಡನ್ ರಿಟ್ರೀವರ್ ತಳಿಯ ಶ್ವಾನವೊಂದು ಆರು ಟೆನಿಸ್ ಬಾಲ್ಗಳನ್ನು ಬಾಯಲ್ಲಿ ಇಟ್ಟುಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಮುಖಾಂತರ ಹೆಚ್ಚು ಚೆಂಡುಗಳನ್ನು ಇಟ್ಟುಕೊಂಡು ಸಾಧನೆ ಮಾಡಿದ್ದು ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ನ್ಯೂಯಾರ್ಕ್ನಲ್ಲಿ ನೆಲೆಸಿರುವ ಚೆರಿ ಹಾಗೂ ರಾಬ್ ಮಾ ಅವರು ಈ ಶ್ವಾನದ ಮಾಲಕರಾಗಿದ್ದಾರೆ. ಈ ಶ್ವಾನದ ಹೆಸರು ಫಿನ್ಲೆ ಎಂದಾಗಿದ್ದು, ಎರಡು ವರ್ಷವಾಗಿದ್ದಾಗಲೇ ಫಿನ್ಲೆಯ ವಿಶೇಷ ಸಾಮರ್ಥ್ಯವು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಚೆರಿ ಅವರ ಮಗಳು ಎರಿನ್ ತನ್ನ ತಾಯಿ ಹಾಗೂ ಫಿನ್ಲೆ ಜೊತೆ ವಿಹಾರಕ್ಕೆ ತೆರಳಿದ್ದ ಸಂದರ್ಭ ಫಿನ್ಲೆ ನಾಲ್ಕು ಚೆಂಡುಗಳನ್ನು ಬಾಯಲ್ಲಿ ಇಟ್ಟುಕೊಂಡಿರುವುದನ್ನು ಎರಿನ್ ನೋಡಿದ್ದು, ತಕ್ಷಣವೇ ಇದರ ಫೋಟೋ ತೆಗೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತಾಗಿ ಪೂರ್ಣ ದಾಖಲೆಗಳನ್ನು ನೀಡಲು ಸಾಧ್ಯವಾಗದೇ ಇದ್ದ ಕಾರಣ ಆ ಸಂದರ್ಭ ಗಿನ್ನಿಸ್ ದಾಖಲೆ ಸಾಧ್ಯವಾಗಿರಲಿಲ್ಲ.
ಸದ್ಯ ಗಿನ್ನಿಸ್ ಜೊತೆಗೆ ಸಂಪರ್ಕ ಕಾಯ್ದುಕೊಂಡಿರುವ ನಾಯಿಯ ಮಾಲಕರು, ಪಿನ್ಲೇ ಸಾಧನೆಯನ್ನು ಗಿನ್ನಿಸ್ ಪುಟಕ್ಕೆ ಸೇರಿಸಲು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.