ಚೀನಾ, ಫೆ.13 (DaijiworldNews/PY): ಕೊರೋನಾ ವೈರಸ್ನಿಂದ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಬುಧವಾರ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರುವ ಮುನ್ನ ಇನ್ನಷ್ಟು ಹದಗೆಡಬಹುದೆಂದು ಜಾಗತಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಬುಧವಾರ ಒಂದೇ ದಿನ ಹುಬೈ ಪ್ರಾಂತ್ಯದಲ್ಲಿ ಕೊರೋನಾ ವೈರಸ್ 242 ಜನರನ್ನು ಬಲಿ ತೆಗೆದುಕೊಂಡಿದೆ. ಈ ಮುಖಾಂತರ ಪ್ರಥಮ ಬಾರಿಗೆ ಒಂದೇ ದಿನದಲ್ಲಿ ಸಾವಿನ ಪ್ರಮಾಣ ದಾಖಲೆಯ ಏರಿಕೆಯಾಗಿದೆ. ಈ ಹಿಂದೆ 103 ಜನರು ಒಂದು ದಿನ ಸಾವನ್ನಪ್ಪಿದ್ದು ಕೊರೋನಾ ಭೀಕರತೆಗೆ ಸಾಕ್ಷಿಯಾಗಿತ್ತು. ಚೀನಾದಲ್ಲಿ ಒಟ್ಟಾರೆ ಕೊರೋನಾ ವೈರಸ್ಗೆ ಬಲಿಯಾದವರ ಸಂಖ್ಯೆ ಸುಮಾರು 1,310ಕ್ಕೆ ಏರಿದೆ.
ಚೀನಾ ವೈಧ್ಯಾಧಿಕಾರಿಗಳು ಸಾವಿನ ಪ್ರಮಾಣ ಎರಡು ವಾರಗಳಲ್ಲಿ ಗಣನೀಯವಾಗಿ ಇಳಿದಿದೆ ಎಂದ ಬೆನ್ನಲ್ಲೆ ಬುಧವಾರ ಏಕಾಏಕಿ 242 ಜನರು ಮೃತರಾಗಿದ್ದಾರೆ. ಈ ಮಾರಾಣಾಂತಿಕ ವೈರಸ್ ಏಪ್ರಿಲ್ ತಿಂಗಳ ವೇಳೆಗೆ ಕೊನೆಗೊಳ್ಳುತ್ತದೆ ಎಂದು ಬೀಜಿಂಗ್ನ ಹಿರಿಯ ವೈದ್ಯಕೀಯ ಸಲಹೆಗಾರರೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.
ಇದರ ನಡುವೆ ಚೀನಾದಲ್ಲಿ 2,015 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ಧೃಢಪಟ್ಟಿದ್ದು, ಹುಬೈ ಪ್ರಾಂತ್ಯದ 14,840 ಜನರಿಗೆ ಬುಧವಾರ ಒಂದೇ ದಿನ ವೈರಾಣು ತಗುಲಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.