ಕ್ವಿವ್, ಫೆ.17 (DaijiworldNews/PY): ಉಕ್ರೇನ್ನ 8ರ ಬಾಲಕಿ ಅನ್ನಾ ಸಾಕಿಡಾನ್ ಎಂಬಾಕೆ ಪ್ರೊಗೇರಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಫೆ.16 ಭಾನುವಾರ ಕೊನೆಯುಸಿರೆಳೆದಿದ್ದಾಳೆ. ಆಕೆಗೆ ಆಗಿರುವುದು 8 ವರ್ಷವಾದರೂ ಆಕೆಯ ಜೈವಿಕ ವಯಸ್ಸು 80 ವರ್ಷ.
ಜಗತ್ತಿನಲ್ಲಿ 160 ಮಂದಿಯಷ್ಟೇ ಪ್ರೊಗೇರಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶರೀರದ ಒಳ ಅಂಗಾಂಗಗಳಿಗೆ ಹಾಗೂ ಶಾರೀರಿಕ ವ್ಯವಸ್ಥೆಗೆ ಅವಧಿಗೆ ಮುನ್ನವೇ ವಯಸ್ಸಾಗುತ್ತಾ ಹೋಗುವ ಕಾಯಿಲೆ ಇದಾಗಿದೆ. ಅನ್ನಾ ಸಾಕಿಡಾನ್ಳ ಮೂಳೆಗಳು ನಿಧಾನವಾಗಿ ಬೆಳೆಯುತ್ತಿದ್ದು, ಆದರೆ ಆಕೆಯ ದೇಹದೊಳಗಿನ ಅಂಗಾಂಗಗಳು ಕ್ಷಿಪ್ರವಾಗಿ ಬೆಳವಣಿಗೆ ಹೊಂದಿದವು. ಹೀಗಾಗಿ ಬಹು ಅಂಗ ವೈಫಲ್ಯದಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕಾಯಿಲೆ ಮೊದಲು 1886ರಲ್ಲಿ ಪತ್ತೆಯಾಯಿತು. ಕಾಯಿಲೆಯಿಂದ ಬಳಲುತ್ತಿರುವವರು 10 ತಿಂಗಳಲ್ಲೇ ಎಲ್ಲರಂತೆ ನಡೆಯಲು ಪ್ರಾರಂಭಿಸುತ್ತಾರೆ. ಇವರು ಹುಟ್ಟುವಾಗ ಸಾಮಾನ್ಯ ಮಕ್ಕಳಂತಿರುತ್ತಾರೆ. ಆದರೆ ಒಂದು ವರ್ಷದಲ್ಲೇ, ಅವರ ಬೆಳವಣಿಗೆಯಲ್ಲಿ ಏರುಪೇರು ಉಂಟಾಗುತ್ತದೆ. ಇಂಥ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ನೋಡಲು ವಿಚಿತ್ರವಾಗಿ ಕಾಣುತ್ತಾರೆ. ಕೆಲವರ ತಲೆಗೂದಲು ಉದುರಿ ಬೋಳಾಗುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ವಯೋವೃದ್ಧರಲ್ಲಿ ಕಂಡುಬರುವಂತಹ ಸಮಸ್ಯೆಗಳು ಇವರನ್ನು ಕಾಡಲಾರಂಭಿಸುತ್ತವೆ.