ಬೀಜಿಂಗ್, ಫೆ.17 (DaijiworldNews/PY): ಚೀನಾದ ವುಹಾನ್ನಿಂದ ಆಗಮಿಸಿದ ಜಪಾನ್ ನ ನೌಕೆಯಲ್ಲಿ ಕೊರೊನಾ ವೈರಸ್ ತಗುಲಿರುವವರ ಸಂಖ್ಯೆ 355ಕ್ಕೆ ಏರಿಕೆಯಾಗಿದ್ದು, ಮತ್ತೊಂದೆಡೆ ನೌಕೆಯಲ್ಲಿರುವ ಪ್ರಯಾಣಿಕರಿಗೆ ಜಪಾನ್ ಸರ್ಕಾರ 2000 ಐಫೋನ್ಗಳನ್ನು ಉಚಿತವಾಗಿ ನೀಡಿರುವುದಾಗಿ ವರದಿ ತಿಳಿಸಿದೆ.
ವುಹಾನ್ನಿಂದ ಆಗಮಿಸಿರುವ ಡೈಮಂಡ್ ಪ್ರಿನ್ಸೆಸ್ ನೌಕೆಯಲ್ಲಿರುವ ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿಗೆ ಐಫೋನ್ ವಿತರಿಸಲಾಗಿದೆ. ಡೈಮಂಡ್ ಪ್ರಿನ್ಸೆಸ್ ನೌಕೆಯಲ್ಲಿ ಅಂದಾಜು 3,700 ಪ್ರಯಾಣಿಕರು ಇದ್ದಾರೆ. ಹಡಗನ್ನು ಚಿಕಿತ್ಸಾಗಾರವನ್ನಾಗಿ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ಐಫೋನ್ ವಿತರಿಸಿರುವ ಮುಖ್ಯ ಉದ್ದೇಶ ನೌಕೆಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಪ್ರಯಾಣಿಕರು ಮೆಡಿಕಲ್ ಸಿಬ್ಬಂದಿಗಳು, ವೈದ್ಯರೊಂದಿಗೆ ಸಂಪರ್ಕದಲ್ಲಿರಲು, ಅಲ್ಲದೇ ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಳ್ಳಲು, ಔಷಧ ಪಡೆದುಕೊಳ್ಳಲು ಹಾಗೂ ದೈಹಿಕ, ಮಾನಸಿಕ ಆರೋಗ್ಯದ ವಿಚಾರವಾಗಿ ಚರ್ಚೆ ನಡೆಸಲು ಐಫೋನ್ ಅನ್ನು ವಿತರಿಸಲಾಗಿದೆ ಎಂದು ವಿವರಿಸಿದೆ.
ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಪ್ರಯಾಣಿಕರಲ್ಲಿ 350 ಮಂದಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದರಲ್ಲಿ ಐವರು ಭಾರತೀಯರು ಸೇರಿದ್ದಾರೆ. ಈಗಾಗಲೇ ಮೂವರು ಭಾರತೀಯರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ.