ಬೀಜಿಂಗ್, ಫೆ 22 (Daijiworld News/MB) : ಚೀನಾದಲ್ಲಿ ಕೊರೋನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲ್ಲೇ ಇದ್ದು ಇದುವರೆಗೂ ಮೃತಪಟ್ಟವರ ಸಂಖ್ಯೆಯು 2,345ಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಸ್ ಹೊಸದಾಗಿ 397 ಜನರಲ್ಲಿ ಪತ್ತೆಯಾಗಿದ್ದು ಇದುವರೆಗೂ 76,288 ಜನರಲ್ಲಿ ಸೋಂಕು ಪತ್ತೆಯಾಗಿದೆ. ಚೀನಾದ ಹುಬೆ ಪ್ರಾಂತ್ಯದಲ್ಲಿ ಕೊರೋನಾ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ಹೇಳಿದೆ.
ಹುಬೈ ಪ್ರಾಂತ್ಯದಲ್ಲಿ ಹೊಸದಾಗಿ 109 ಸಾವುಗಳು ಸಂಭವಿಸಿದ್ದು, ವುಹಾನ್ನಲ್ಲಿ 90 ಜನರು ಸಾವನ್ನಪ್ಪಿದ್ದಾರೆ. ಈವರೆಗೂ ಸಾವನ್ನಪ್ಪಿದವರ ಸಂಖ್ಯೆ 2,345ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಲೆಬನಾನ್ ಮತ್ತು ಇಸ್ರೇಲ್ನಲ್ಲಿ ಮೊದಲ ಪ್ರಕರಣಗಳು ದೃಢಪಟ್ಟಿವೆ. ಹಾಗೆಯೇ ಸೋಂಕಿತರ 13 ಹೊಸ ಪ್ರಕರಣಗಳ ಪೈಕಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದ್ದು ಈವರೆಗೆ ಇರಾನ್ನಲ್ಲಿ 18 ಸೋಂಕು ಪೀಡಿತ ಪ್ರಕರಣಗಳ ಪೈಕಿ 4 ಜನರು ಮೃತಪಟ್ಟಿದ್ದಾರೆ.
ಇಟಲಿಯಲ್ಲೂ ಕೊರೋನಾ ವೈರಸ್ನಿಂದಾಗಿ ಸಾವನ್ನಪ್ಪಿದ ಕುರಿತು ವರದಿಯಾಗಿದ್ದು 10 ಉತ್ತರದ ಪಟ್ಟಣಗಳಲ್ಲಿನ ಶಾಲೆಗಳು, ಬಾರ್ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ.
ಕೊರೋನಾ ವೈರಸ್ ಮೊದಲಿಗೆ ಕಳೆದ ವರ್ಷದ ಡಿಸೆಂಬರ್ನಲ್ಲಿ ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡಿತು. ಆ ನಂತರ ಈ ಸೋಂಕು ಇತರೆ 20ಕ್ಕೂ ಅಧಿಕ ರಾಷ್ಟ್ರಗಳಿಗೆ ತನ್ನ ಕರಾಳ ಹಸ್ತ ಚಾಚಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಚೀನಾದಾದ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಪ್ರಯಾಣವನ್ನೂ ನಿರ್ಬಂಧಿಸಲಾಗಿದೆ.