ಬ್ರಿಸ್ಬೇನ್, ಫೆ.22 (DaijiworldNews/PY): ಆಸ್ಟ್ರೇಲಿಯಾದ 9 ವರ್ಷದ ಬಾಲಕನೋರ್ವ ಕುಬ್ಜತೆಯಿಂದ ಬಳಲುತ್ತಿದ್ದು, ಈತನನ್ನು ಸಹಪಾಠಿಗಳು ತಮಾಷೆ ಮಾಡಿ, ರೇಗಿಸಿ, ಬೆದರಿಸುತ್ತಿದ್ದಾರೆ. ಇದರಿಂದ ನೊಂದಿರುವ ಬಾಲಕ ನಾನು ಸಾಯಬೇಕು, ಇಲ್ಲವೇ ನನ್ನನ್ನು ಸಾಯಿಸಿಬಿಡಿ ಎಂದು ಕೇಳಿಕೊಂಡಿದ್ದಾನೆ.
ಆಸ್ಟ್ರೇಲಿಯಾದ ಮಹಿಳೆಯೊಬ್ಬರು ತಮ್ಮ 9 ವರ್ಷದ ಕ್ವಾಡನ್ನ ವಿಡಿಯೋವನ್ನು ಶೇರ್ ಮಾಡಿದ್ದು, ಆ ವಿಡಿಯೋದಲ್ಲಿ ಆತ ಅಳುತ್ತಾ ಯಾರಾದರೂ ನನ್ನನ್ನು ಕೊಂದುಬಿಡಿ. ಇಲ್ಲವಾದಲ್ಲಿ ನನಗೆ ಚಾಕು ಕೊಡಿ ಚುಚ್ಚಿಕೊಂಡು ನಾನೇ ಸಾಯುತ್ತೇನೆ ಎಂದು ಹೇಳಿದ್ದಾನೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ರೇಗಿಸಿದರೆ, ಬೆದರಿಸಿದರೆ ಯಾವ ರೀತಿಯಾಗಿ ಮಾನಸಿಕ ಪರಿಣಾಮ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ ಎಂದು ಸುಮಾರು 6 ನಿಮಿಷಗಳ ವಿಡಿಯೋ ಮಾಡಿದ್ದಾರೆ. ಕ್ವಾಡನ್ ಎಂಬ 9 ವರ್ಷದ ಕ್ವಾಡನ್ನ ವಿಡಿಯೋ ಇದಾಗಿದೆ. ಕ್ವಾಡನ್ ತಾಯಿ ಯಾರ್ಕಾ ಬೈಲ್ಸ್ ಈ ವಿಡಿಯೋ ಚಿತ್ರೀಕರಿಸಿದ್ದಾರೆ.
ವಿಡಿಯೋವನ್ನು ಮಾಡಿರುವ ಕ್ವಾಡನ್ನ ತಾಯಿ ಪೂರ್ತಿ ಘಟನೆಯನ್ನು ವಿವರಿಸಿದ್ದೂ ಅಲ್ಲದೇ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ, ಶಾಲೆಯ ಆಡಳಿತ ಮಂಡಳಿಗೆ ಸಂದೇಶ ನೀಡಿದ್ದಾರೆ.
ಎತ್ತರ, ಮುಖ ನೋಡಿ ಶಾಲೆಯಲ್ಲಿ ಹಲವಾರು ಮಂದಿ ರೇಗಿಸಿದ್ದಾರೆ, ಕೆಲವರು ಬೆದರಿಸಿದ್ದಾರೆ. ನನ್ನನ್ನು ಯಾರಾದರೂ ಕೊಂದುಬಿಡಿ. ಇಲ್ಲವಾದಲ್ಲಿ ನಾನೇ ಚುಚ್ಚಿಕೊಂಡು ಸಾಯುತ್ತೇನೆ ಎಂದು ಕ್ವಾಡನ್ ವಿಡಿಯೋದಲ್ಲಿ ಅಳುತ್ತಾ ಹೇಳಿದ್ದಾನೆ.
ಈ ವಿಚಾರವಾಗಿ ವಿಡಿಯೋದಲ್ಲಿ ಕ್ವಾಡಲ್ ತಾಯಿಯೂ ಮಾತನಾಡಿದ್ದು, ಸ್ನೇಹಿತರೇ, ಶಿಕ್ಷಕರೇ, ವಿದ್ಯಾವಂತರೇ, ಪೋಷಕರೇ ಇವನನ್ನು ನೋಡಿ ರೇಗಿಸುವುದು, ಬೆದರಿಸುವುದು ಮಾಡುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿ ಮಾಡಿದರೆ, ಮಗು ಆತ್ಮಹತ್ಯೆಗೂ ಪ್ರಯತ್ನಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.