ವಾಷಿಂಗ್ಟನ್, ಫೆ 23 (Daijiworld News/MB) : ಎರಡು ದಿನಗಳ ಪ್ರವಾಸಕ್ಕಾಗಿ ಇದೇ 24ರಂದು ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, "ಭಾರತದ ಸ್ನೇಹಿತರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ" ಎಂದು ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದಾರೆ.
ವೆರಿಫೈ ಅಲ್ಲದ ಟ್ವಿಟರ್ ಖಾತೆಯಲ್ಲಿ ರಾಜಮೌಳಿ ನಿರ್ದೇಶನದ ಜನಪ್ರಿಯ ಸಿನಿಮಾ ‘ಬಾಹುಬಲಿ’ಯ ಎಡಿಟ್ ಮಾಡಲಾದ ವಿಡಿಯೊ ತುಣುಕೊಂದನ್ನು ಟ್ವೀಟ್ ಮಾಡಲಾಗಿದ್ದು ಅದರಲ್ಲಿ ಪ್ರಭಾಸ್ ಪಾತ್ರಕ್ಕೆ ಟ್ರಂಪ್ ಮುಖವನ್ನು ಜೋಡಿಸಲಾಗಿದೆ. ಈ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ಟ್ರಂಪ್ "ಭಾರತದ ಸ್ನೇಹಿತರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಎಡಿಟ್ ಮಾಡಲಾದ ಬಾಹುಬಲಿ ಸಿನಿಮಾದ ವಿಡಿಯೋದಲ್ಲಿ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್ ಇದ್ದಾರೆ. ಹಾಗೆಯೇ ಪ್ರಜೆಗಳಿಗೆ ದಾನ ಮಾಡುತ್ತಿರುವ ಮೋದಿ ಮತ್ತು ಪತ್ನಿ ಜಶೋಧಾ ಬೆನ್ ಅವರೂ ಇದ್ದಾರೆ.
ಈವರೆಗೆ 54 ಸಾವಿರಕ್ಕೂ ಅಧಿಕ ಮಂದಿ ಟ್ರಂಪ್ ಅವರ ಈ ಪೋಸ್ಟ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು 15.1 ಸಾವಿರ ಮಂದಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಇದಕ್ಕೆ 6.7 ಸಾವಿರ ಕಮೆಂಟ್ಗಳೂ ಬಂದಿವೆ. ಹಾಗೆಯೇ ಎಡಿಟ್ ಮಾಡಲಾದ ವಿಡಿಯೊ ಇರುವ ಟ್ವೀಟ್ ಅನ್ನು ರೀಟ್ವೀಟ್ ಮಾಡಿಕೊಂಡಿದ್ದಕ್ಕೆ ಆಕ್ಷೇಪ, ವ್ಯಂಗ್ಯ ಮತ್ತು ಮೆಚ್ಚುಗೆಗಳೂ ಕೇಳಿ ಬಂದಿವೆ.
ಅಮೆರಿಕಾದ ಚಿತ್ರ ನಿರ್ಮಾಪಕರೊಬ್ಬರು, "ಈವರೆಗೆ ನೀವು ಮಾಡಿರುವ ಟ್ವೀಟ್ಗಳಲ್ಲಿ ಇದು ಅತ್ಯಂತ ಕೆಳದರ್ಜೆಯದ್ದು, ನೀವೊಬ್ಬ ಸೈಕೋಪಾತ್" ಎಂದಿದ್ದು ಇನ್ನೋರ್ವರು ಈ ಪೋಸ್ಟ್ ಅದ್ಭುತವಾಗಿದೆ. ಅತ್ಯಂತ ಕ್ರಿಯಾಶೀಲವಾದ ಈ ಪೋಸ್ಟ್ ನನಗೆ ಹಿಡಿಸಿತು ಎಂದು ಕಮೆಂಟ್ ಮಾಡಿದ್ದಾರೆ.
ಹಾಗೆಯೇ ಇನ್ನೂ ಕೆಲವರು ಕೊರೋನಾ ವೈರಸ್ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅಸಂಖ್ಯತರಾದ ಚೀನಾ ಪ್ರವಾಸಿಗಳ ಬಗ್ಗೆ ಭಾರತ ಮಾತನಾಡುತ್ತಿಲ್ಲ. ಕೊರೋನಾ ವೈರಸ್ ಬಗ್ಗೆ ಎಚ್ಚರವಾಗಿರಿ ಎಂದು ಕಮೆಂಟ್ ಮಾಡಿದ್ದಾರೆ.