ವಾಷಿಗ್ಟಂನ್, ಫೆ.25 (DaijiworldNews/PY): ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಮಂಡಳಿಯ ಅಧೀವೇಶನ ಮಂಗಳವಾರ ನಡೆಯಲಿದ್ದು, ಈ ಹಿಂದೆ ಪಾಕಿಸ್ತಾನ ನಿಗದಿಪಡಿಸಿದಂತೆ ವಿದೇಶಾಂಗ ಸಚಿವ ಮಕ್ದೂಮ್ ಶಾ ಮೆಹ್ಮೂದ್ ಖುರೇಶಿ ಅವರ ಬದಲು ಮಾನವ ಹಕ್ಕುಗಳ ಸಚಿವ ಶಿರೀನ್ ಮಝ್ರಿ ಅವರನ್ನು ಅಧಿವೇಶನಕ್ಕೆ ಕಳುಹಿಸಲು ತೀರ್ಮಾನಿಸಿದೆ.
ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಮಂಡಳಿಯ ಅಧೀವೇಶನದ ಸಂದರ್ಭ ಜಮ್ಮು-ಕಾಶ್ಮೀರದ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಭಾರತ ಸರ್ಕಾರವು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಮನ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಹಿಂದೆ ಮಾನವ ಹಕ್ಕುಗಳ ಸಚಿವ ಶಿರೀನ್ ಮಝ್ರಿ ಅವರು, ಭಾರತದ ಹಿಡಿತದಲ್ಲಿರುವ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಮೌನ ವಹಿಸುವ ಮೂಲಕ ಐರೋಪ್ಯ ಒಕ್ಕೂಟ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದ್ದರು. ವಿಶ್ವಸಂಸ್ಥೆಯಲ್ಲಿ ಇಂದು ನಡೆಯುವ ಅಧಿವೇಶನದಲ್ಲಿಯೂ ಮಝ್ರಿ ಅವರು ಸಿಎಎ ವಿಚಾರವಾಗಿ ಪ್ರಸ್ತಾಪಿಸಬಹುದು ಎನ್ನಲಾಗಿದೆ.
ಫೆ.26ರಂದು ಭಾರತವನ್ನು ಪ್ರತಿನಿಧಿಸಲಿರುವ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಅವರು ಭಾಷಣ ಮಾಡಲಿದ್ದು, ಭಾಷಣದಲ್ಲಿ ಪಾಕ್ನ ಆರೋಪಗಳಿಗೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಚೀನಾ ಮಾನವ ಹಕ್ಕು ಮಂಡಳಿಯಲ್ಲಿ ಸದಸ್ಯ ರಾಷ್ಟ್ರವಲ್ಲ. ಮಲೇಷಿಯಾ ಹಾಗೂ ಟರ್ಕಿ ಪಾಕಿಸ್ತಾನದ ಆಪ್ತ ರಾಷ್ಟ್ರಗಳಾಗಿದ್ದು ಪಾಕಿಸ್ತಾನಕ್ಕೆ ಇದರ ಬೆಂಬಲ ಸಿಗದು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬ್ರುಸೆಲ್ಸ್ನಲ್ಲಿ ಕಳೆದ ವಾರ ನಡೆದ ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರ ಸಭೆಯಲ್ಲಿ ಸಂವಿಧಾನದ 370ನೇ ವಿಧಿ ರದ್ದತಿ ಹಾಗು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಇದನ್ನು ವಿರೋಧಿಸಿದ ಪಾಕಿಸ್ತಾನದ ಶಿರೀನ್ ಮಝ್ರಿ ಪ್ರತಿಕ್ರಿಯೆ ನೀಡಿದ್ದರೂ, ಅದಕ್ಕೆ ಅಂಥ ಮನ್ನಣೆ ದೊರಕಲಿಲ್ಲ.