ಪಾಕಿಸ್ತಾನ, ಫೆ.27 (DaijiworldNews/PY) : ಚೀನಾದ ಜನರ ಪ್ರಾಣವನ್ನು ಬಲಿತೆಗೆದುಕೊಂಡ ಕೊರೋನಾ ವೈರಸ್ ಇದೀಗ ಪಾಕಿಸ್ತಾನಕ್ಕೂ ದಾಪುಗಾಲಿಟ್ಟಿದ್ದು, ಕರಾಚಿ ಹಾಗೂ ಇಸ್ಲಾಮಾಬಾದ್ನಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.
ಈ ಮಾಹಿತಿಯನ್ನು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿಶೇಷ ಆರೋಗ್ಯ ಸಲಹೆಗಾರರಾದ ಡಾ. ಜಾಫರ್ ಮಿರ್ಜಾ ಅವರು ಖಚಿತಪಡಿಸಿದ್ದು, ಇರಾನ್ಗೆ ತೆರಳಿ ವಾಪಾಸಾಗುತ್ತಿದ್ದ ಇಬ್ಬರಿಗೆ ಕೊರೋನಾ ವೈರಸ್ ತಗುಲಿದೆ ಎಂದು ತಿಳಿಸಿದ್ದಾರೆ. ಈ ಮುಖಾಂತರ ಕೊರೋನಾ ವೈರಸ್ ಯುರೋಪಿಯನ್ ರಾಷ್ಟ್ರಗಳಿಗೂ ಪ್ರವೇಶಿಸಿದೆ.
ಪಾಕಿಸ್ತಾನದಲ್ಲಿ ದಾಖಲಾದ ಮೊದಲ ಎರಡು ಪ್ರಕರಣಗಳು ಇದಾಗಿದ್ದು, ಸೋಂಕು ಪೀಡಿತರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ವೈರಸ್ ದಕ್ಷಿಣ ಕೊರಿಯಾದಲ್ಲೂ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಈವರೆಗೂ ಮಾರಣಾಂತಿಕ ಸೋಂಕಿಗೆ ಬಲಿಯಾದವರ ಸಂಖ್ಯೆ 12ಕ್ಕೇರಿದೆ. 334 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮುಖಾಂತರ ಒಟ್ಟು ಸೋಂಕಿತರ ಸಂಖ್ಯೆ 1,595ಕ್ಕೆ ಏರಿಕೆಯಾಗಿದೆ.
ಮೂಲಗಳ ಪ್ರಕಾರ ಇಟಲಿಯಲ್ಲೂ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಬುಧವಾರ ಇಟಲಿಯಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ 400ಕ್ಕೇರಿದೆ ಎಂದು ತಿಳಿದುಬಂದಿದೆ.
ಚೀನಾ, ದಕ್ಷಿಣ ಕೊರಿಯಾ ಮಾತ್ರವಲ್ಲದೇ ವಿಶ್ವಾದ್ಯಂತ ಸುಮಾರು 40 ದೇಶಗಳಲ್ಲಿ ಕೊರೋನಾ ವೈರಸ್ ಪಸರಿಸಿದ್ದು, ಸುಮಾರು 80 ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಚೀನಾವೊಂದರಲ್ಲೇ ಸೋಂಕಿತರ ಸಂಖ್ಯೆ 78,497ರಷ್ಟಿದೆ ಎಂದು ತಿಳಿದುಬಂದಿದೆ.
ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 2,744 ಕ್ಕೆ ತಲುಪಿದೆ.