ದೋಹಾ, ಫೆ.29 (DaijiworldNews/PY) : ಅಮೆರಿಕ ಹಾಗೂ ತಾಲಿಬಾನ್ ಮಹತ್ವದ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಶನಿವಾರ ಸಹಿ ಹಾಕಿದ್ದು, ಅಫ್ಘಾನಿಸ್ತಾನದಲ್ಲಿ 18 ವರ್ಷಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಿದೆ.
ಈ ಸಭೆಯು ಕತಾರ್ನ ದೋಹಾದಲ್ಲಿ ನಡೆದಿದ್ದು, ತನ್ನ ಸೈನ್ಯವನ್ನು ಸಂಪೂರ್ಣವಾಗಿ 14 ತಿಂಗಳೊಳಗೆ ಅಫ್ಗಾನಿಸ್ತಾನದಿಂದ ಪುನಃ ಕರೆಸಿಕೊಳ್ಳುವ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ.
ಈ ಮಹತ್ವದ ಒಪ್ಪಂದದ ವಿಚಾರವಾಗಿ ಮಾತನಾಡಿದ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, "ತಾಲಿಬಾನ್ ಸಂಘಟನೆಗೆ ನೀಡಿರುವ ಮಾತಿಗೆ ತಕ್ಕಂತೆ ನಡೆದುಕೊಳ್ಳದೇ ಇದಲ್ಲಿ ಅಮೆರಿಕಾ ಒಪ್ಪಂದವನ್ನು ರದ್ದುಗೊಳಿಸಲು ಹಿಂಜರಿಯುವುದಿಲ್ಲ" ಎಂದು ತಿಳಿಸಿದ್ದಾರೆ.
"ತಾಲಿಬಾನ್ ಸಂಘಟನೆ ನಾಯಕರು ಅಫ್ಗಾನಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬದ್ದತೆ ತೋರಬೇಕು. ಅಫ್ಗಾನ್ ನಾಯಕರೊಂದಿಗೆ ಕುಳಿತು ಮಾತುಕತೆ ನಡೆಸಿ ತಮ್ಮ ದೇಶದ ಅಭಿವೃದ್ದಿಯತ್ತ ಗಮನ ಹರಿಸಬೇಕು" ಎಂದು ಎಸ್ಪರ್ ಹೇಳಿದ್ದಾರೆ.