ಲಂಡನ್, ಮಾ.01 (DaijiworldNews/PY) : ಇಂಗ್ಲೆಂಡ್ ಹಾಗೂ ಯೂರೋಪ್ನ ವಿವಿಧೆಡೆಗಳಲ್ಲಿ ಭಾರತದಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ರದ್ದತಿಗೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು, ಮಾನವ ಹಕ್ಕು ಹೋರಾಟಗಾರರು ಹಾಗೂ ಭಾರತೀಯ ಮೂಲದವರು ಶನಿವಾರ ಭಾರತೀಯ ಹೈಕಮಿಷನ್ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಭಾರತೀಯರು, ಸ್ಕೂಲ್ ಆಫ್ ಓರಿಯಂಟಲ್ ಹಾಗೂ ಆಫ್ರಿಕನ್ ಸ್ಟಡೀಸ್ನಲ್ಲಿ ದೆಹಲಿ ಹಿಂಸಾಚಾರ ಹಾಗೂ ಸಿಎಎ ಕಾಯ್ದೆ ವಿರುದ್ಧ ಹೋರಾಟಗಾರರು, ಸೌತ್ ಏಷ್ಯನ್ ಸ್ಟೂಡೆಂಟ್ಸ್ ಎಗೆನಿಸ್ಟ್ ಫ್ಯಾಸಿಸಂ ಹಾಗೂ ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್ ಸದಸ್ಯರು ಪ್ರತಿಭಟನೆ ನಡೆಸಿದರು.
ಲಂಡನ್ನಲ್ಲಿ ಮಾತ್ರವಲ್ಲದೇ, ಯೂರೋಪ್ನಾದ್ಯಂತ ಸುಮಾರು 17 ನಗರಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಯಿತು. ದೆಹಲಿ ಹಿಂಸಾಚಾರದಲ್ಲಿ ಸಂತ್ರಸ್ತರಾದವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂಬ ಸಂದೇಶದೊಂದಿಗೆ ಪ್ಯಾರೀಸ್, ಬರ್ಲಿನ್, ಬ್ರುಸ್ಸೆಲ್ಸ್, ಜಿನೀವಾ ಹಾಗೂ ಮತ್ತಿತರ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಯಿತು.
ಇದನ್ನು ತಕ್ಷಣವೇ ಗಮನಿಸಿದ ವಿಶ್ವ, ಇದಕ್ಕೆ ತುತ್ಆಗಿ ಸ್ಪಂದಿಸದೇ ಇದ್ದರೆ. ಇದರ ಪರಿಣಾಮ ಹೆಚ್ಚಾಗುತ್ತದೆ ಎಂದು ಎನ್ಒಎಎಸ್ ಇಂಡಿಯನ್ ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಭಾರತದ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ಘೀಷಣೆ ಕೂಗಿದರು. ಗೃಹ ಸಚಿವರು ರಾಜ್ಯದಲ್ಲಿ ಶಾಂತಿ ಕಾಪಾಡಲು ವಿಫಲರಾಗಿದ್ದಾರೆ, ಅವರು ರಾಜೀನಾಮೆ ನೀಡಬೇಕು ಹಾಗೂ ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಬಿಜೆಪಿ ಮುಖಂಡರನ್ನು ಬಂಧಿಸಬೇಕು. ಬ್ರಿಟನ್ ಸರ್ಕಾರ ದೆಹಲಿ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಬೇಕು ಎಂದು ತಿಳಿಸಿದರು.