ಬೀಜಿಂಗ್, ಮಾ 2 (Daijiworld News/MSP): ಚೀನಾದಲ್ಲಿ ಪ್ರಾರಂಭವಾದ ಮಾರಕ ಕೊರೊನಾ ವೈರಸ್ಗೆ ಜಾಗತಿಕವಾಗಿ ತನ್ನ ಕಬಂಧಬಾಹುಗಳನ್ನು ಚಾಚಿದ್ದು , ಇದೀಗ ಮಾಹಮಾರಿ 60 ದೇಶಗಳಿಗೂ ವ್ಯಾಪಿಸಿದ್ದು, ಜಾಗತಿಕವಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 3000 ಗಡಿಯನ್ನು ದಾಟಿದೆ. ಇದಲ್ಲದೆ ಜಾಗತಿಕವಾಗಿ ಸುಮಾರು 87 ಸಾವಿರ ಮಂದಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ನಿಗಾದಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಹೊಸ ವರದಿಯಲ್ಲಿ ತಿಳಿಸಿದೆ.
ಚೀನಾವೊಂದರಲ್ಲೇ 2,912 ಮಂದಿ ಈವರೆಗೆ ಕೊರೊನಾ ವೈರಸ್ಗೆ ಬಲಿಯಾಗಿದ್ದು, 79,824 ಸೋಂಕಿತರಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ಬೆಳಗ್ಗೆ ಮಾಹಿತಿ ನೀಡಿದೆ.
ಇನ್ನು ಜಪಾನ್ನ ಡೈಮಂಡ್ ಪ್ರಿನ್ಸೆಸ್ ನೌಕೆಯಿಂದ ಸ್ವದೇಶಕ್ಕೆ ಮರಳಿದ್ದ 78 ವರ್ಷದ ವ್ಯಕ್ತಿ ಸಿಡ್ನಿಯ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. . ಈ ಮೂಲಕ ಆಸ್ಟ್ರೇಲಿಯಾದಲ್ಲಿ ಕೊರೊನಾಗೆ ಮೊದಲ ಬಲಿ ಆದಂತಾಗಿದೆ. ಅಮೆರಿಕದಲ್ಲೂ ವೈರಸ್ಗೆ ಮೊದಲ ಸಾವು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇರಾನ್, ಇಟಲಿ ಸೇರಿ ಕೆಲವು ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿ ಅಧ್ಯಕ್ಷ ಟ್ರಂಪ್ ಆದೇಶ ಹೊರಡಿಸಿದ್ದಾರೆ
ಕೊರೊನಾ ವೈರಸ್ ಕಳೆದ ವರ್ಷ ಡಿಸೆಂಬರ್ನಲ್ಲಿ ಕೇಂದ್ರ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ಸ್ಫೋಟಗೊಂಡಿತ್ತು. ಅದರಲ್ಲೂ ಜೀವಂತ ಪ್ರಾಣಿ ಮಾರುಕಟ್ಟೆಯಿಂದ ಹರಡಿತ್ತು ಎಂದು ಹೇಳಲಾಗಿದೆ.
ಇನ್ನು ಮಲೇಷ್ಯಾದಿಂದ ಬಂದಿದ್ದ ವ್ಯಕ್ತಿ ಕೇರಳದ ಎರ್ನಾಕುಲಂ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದು , ಇವರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿದೆ.