ವಾಷಿಂಗ್ಟನ್, ಮಾ.04 (DaijiworldNews/PY) : ಕೋವಿಡ್–19 ಜಾಗತಿಕವಾಗಿ ವ್ಯಾಪಿಸಿದ್ದು, ಇದೀಗ ವಿಶ್ವಸಂಸ್ಥೆಯ 64ನೇ ವಾರ್ಷಿಕ ಅಧಿವೇಶನದ ಮೇಲೆಯೂ ಪರಿಣಾಮ ಬೀರಿದೆ.
ಮಾ.9ರಿಂದ ಮಾ.20ರವರೆಗೆ ನಡೆಯಬೇಕಾಗಿದ್ದ ವಿಶ್ವಸಂಸ್ಥೆಯ 64ನೇ ವಾರ್ಷಿಕ ಅಧಿವೇಶನವು ವೈರಸ್ ಭೀತಿಯಿ೦ದಾಗಿ ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸಲು ತೀರ್ಮಾನಿಸಿದೆ.
ಅಧಿವೇಶನದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ವಿಷಯಗಳ ಕುರಿತು ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಈ ಅಧಿವೇಶನದಲ್ಲಿ 193 ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ. ಆದರೆ, ಅಧಿವೇಶನದ ಅವಧಿಯನ್ನು ವೈರಸ್ ಭೀತಿಯಿಂದ ಮೊಟಕುಗೊಳಿಸಲು ತೀರ್ಮಾನಿಸಲಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಾದ ನ್ಯೂಯಾರ್ಕ್ನಲ್ಲಿ ವೈರಸ್ ಸೋಂಕಿಗೆ ಒಬ್ಬರು ಒಳಗಾಗಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕೋವಿಡ್–19 ಬಗ್ಗೆ ಚರ್ಚಿಸುವ ಉದ್ದೇಶವಿಲ್ಲ . ವೈರಸ್ ಬಗ್ಗೆ ಗಾಬರಿ ಬೇಡ. ಚೀನಾ ವೈರಸ್ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದು, ಉತ್ತಮ ಫಲಿತಾಂಶ ಈಗಾಗಲೇ ಸಿಕ್ಕಿದೆ. ಈಗ ಪರಿಸ್ಥಿತಿ ಸುಧಾರಿಸಿದೆ ಎಂಬುದಾಗಿ ವಿಶ್ವಸಂಸ್ಥೆಯ ಚೀನಾದ ರಾಯಭಾರಿ ಝಾಂಗ್ ಜುನ್ ಹೇಳಿದ್ದಾರೆ.
ಅಮೆರಿಕದಲ್ಲಿ ಕೋವಿಡ್–19 ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ.
ಈ ವೈರಸ್ ಸೋಂಕು 90ಕ್ಕೂ ಹೆಚ್ಚು ಮಂದಿಯಲ್ಲಿ ಇರುವುದು ದೃಢಪಟ್ಟಿದೆ. ಮೃತಪಟ್ಟವರೆಲ್ಲರೂ ವಾಷಿಂಗ್ಟನ್ ರಾಜ್ಯದವರಾಗಿದ್ದಾರೆ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ತಿಳಿಸಿದ್ದಾರೆ.
ವೈರಸ್ ಹರಡುತ್ತಿರುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಪೆನ್ಸ್ ಅವರು ಹಿರಿಯ ಅಧಿಕಾರಿಗಳು ಹಾಗೂ ಫಾರ್ಮಾ ಕಂಪನಿಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಗಡಿಗಳನ್ನು ವೈರಸ್ ಹಬ್ಬದಂತೆ ಮುಚ್ಚಲಾಗಿದೆ. ತಪಾಸಣೆಯನ್ನು ಹೆಚ್ಚಿಸಲಾಗಿದೆ. ಪ್ರವಾಸಕ್ಕೂ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಟ್ರಂಪ್ ಸಭೆಯಲ್ಲಿ ತಿಳಿಸಿದರು.
ವೈರಸ್ ನಿಯಂತ್ರಿಸುವ ಬಗ್ಗೆ ಹಲವು ಕಂಪನಿಗಳು ಸಂಶೋಧನೆಯಲ್ಲಿ ತೊಡಗಿವೆ. ಲಸಿಕೆಗಳ ಪ್ರಾಯೋಗಿಕ ಪರೀಕ್ಷೆಯು ಮುಂದಿನ ಆರು ವಾರಗಳಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ, ಈ ವರ್ಷದ ಅಂತ್ಯಕ್ಕೆ ಲಸಿಕೆ ಲಭ್ಯವಾಗುವುದಿಲ್ಲ. ಅಮೆರಿಕನ್ನರಿಗೆ ಕೋವಿಡ್ನಿಂದ ಹೆಚ್ಚಿನ ಅಪಾಯವಿಲ್ಲ. ಜನರು ಆತಂಕ ಪಡುವುದು ಬೇಡ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ದೇಶಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಪೆನ್ಸ್ ತಿಳಿಸಿದ್ದಾರೆ.
ವೈರಸ್ಗೆ ಲಸಿಕೆ ಅಭಿವೃದ್ಧಿಪಡಿಸುವ ಕುರಿತು ಅಮೆರಿಕದ ಕಂಪನಿಗಳು ಮಾಹಿತಿಯನ್ನು ಹಂಚಿಕೊಳ್ಳಲು ಒಕ್ಕೂಟವನ್ನು ರಚಿಸಿಕೊಂಡಿವೆ. 67 ದೇಶಗಳಲ್ಲಿ ಇದುವರೆಗೆ ವೈರಸ್ ಸೋಂಕು ವ್ಯಾಪಿಸಿದ್ದು, 3,100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ, 89,527 ಮಂದಿಯಲ್ಲಿ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ತಿಳಿಸಿದೆ.
ಮಂಗಳವಾರ ಇರಾನ್ನಲ್ಲಿ ಮತ್ತೆ 11 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಮೃತಪಟ್ಟವರ ಸಂಖ್ಯೆ 77ಕ್ಕೇರಿದೆ.
ದಕ್ಷಿಣ ಕೊರಿಯಾದಲ್ಲಿ ಕೋವಿಡ್–19 ಸೋಂಕಿಗೆ ಒಳಗಾದವರ ಸಂಖ್ಯೆ 5,000ಕ್ಕೆ ತಲುಪಿದೆ. ಚೀನಾ ಹೊರತುಪಡಿಸಿದರೆ ದಕ್ಷಿಣ ಕೊರಿಯಾದಲ್ಲೇ ಅತಿ ಹೆಚ್ಚು ಮಂದಿ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಮತ್ತೆ ಇಬ್ಬರು ಸಾವಿಗೀಡಾಗಿದ್ದು, ಮೃತಪಟ್ಟವರ ಸಂಖ್ಯೆ 28ಕ್ಕೇರಿದೆ.
ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಅವರಲ್ಲಿ ಕೋವಿಡ್–19 ಸೋಂಕು ಇಲ್ಲ ಎಂದು ಇಟಲಿಯ ದಿನಪತ್ರಿಕೆ ವರದಿ ಮಾಡಿದೆ.
ಕಳೆದ ವಾರಾಂತ್ಯದಲ್ಲಿ ಪೋಪ್ ಅವರು ಅನಾರೋಗ್ಯ ಕಾರಣಕ್ಕೆ ಎಲ್ಲ ಸಾರ್ವಜನಿಕ ಸಭೆಗಳನ್ನು ರದ್ದುಪಡಿಸಿದ್ದರು.
ಇಟಲಿಯಲ್ಲಿ ಸುಮಾರು 2000 ಮಂದಿ ಸೋಂಕಿಗೆ ಒಳಗಾಗಿದ್ದು, 52 ಮಂದಿ ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ ಇರುವ ಟ್ವೀಟರ್ ಕಂಪನಿಯ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಈ ಸೂಚನೆ ಸೋಮವಾರದಿಂದಲೇ ನೀಡಲಾಗಿದೆ. ಕೋವಿಡ್–19 ಹರಡುವುದನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ. ಈ ಸೂಚನೆಯನ್ನು ದಕ್ಷಿಣ ಕೊರಿಯಾ, ಹಾಂಗ್ಕಾಂಗ್ ಹಾಗೂ ಜಪಾನ್ ದೇಶಗಳಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ಅಲ್ಲಿನ ಸಿಬ್ಬಂದಿಗೆ ಟ್ವೀಟರ್ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜೆನ್ನಿಫರ್ ಕ್ರಿಸ್ಟಿ ತಿಳಿಸಿದ್ದಾರೆ.
ಕೋವಿಡ್–19 ಕಾರ್ಯ ಪಡೆಯ ಸದಸ್ಯರನ್ನಾಗಿ ಭಾರತ ಸಂಜಾತ ಅಮೆರಿಕದ ಆರೋಗ್ಯ ನೀತಿಯ ಸಮಾಲೋಚಕ ಸೀಮಾ ವರ್ಮಾ ಅವರನ್ನು ನೇಮಿಸಲಾಗಿದೆ. ಈ ಕಾರ್ಯಪಡೆಯನ್ನು ವೈರಸ್ ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಚಿಸಿದ್ದಾರೆ.