ವಾಷಿಂಗ್ಟನ್, ಮಾ.05 (DaijiworldNews/PY) : ಮಹಾಮಾರಿ ಕೊರೋನಾ ವೈರಸ್ ಜಗತ್ತಿನಾದ್ಯಂತ ಆತಂಕ ಸೃಷ್ಠಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರುಕಾಮನ್ ಸೆನ್ಸ್ ಬಳಸಿ ಸೋಂಕಿನಿಂದ ಪಾರಾಗಿ ಎಂದು ಜನರಿಗೆ ಕಿವಿ ಮಾತು ನೀಡಿದ್ದಾರೆ.
ಕೊರೋನಾ ವೈರಸ್ ಬಗ್ಗೆ ಜನರಿಗೆ ಕಿವಿ ಮಾತು ಹೇಳಿದ ಒಬಾಮಾ ಅವರು, ಚೆನ್ನಾಗಿ ಕೈ ತೊಳೆದುಕೊಳ್ಳಿ, ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ಗಳನ್ನು ಮೀಸಲಾಗಿಡಿ, ಅನಾರೋಗ್ಯ ಬಂದಾಗ ಮನೆಯಲ್ಲಿಯೇ ಇರಿ, ಸೋಂಕು ದೃಢಪಟ್ಟರೆ ಸ್ಥಳೀಯ ಆರೋಗ್ಯ ಕಾರ್ಯಕರ್ತರ ಮಾತನ್ನು ಗಮನವಿಟ್ಟು ಕೇಳಿ, ಗಾಬರಿ ಪಡದೇ ಸಮಾಧಾನವಾಗಿರಿ, ತಜ್ಞರ ಮಾತುಗಳನ್ನು ಆಲಿಸಿ ಎಂದು ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ.
ಏಕಾಏಕಿ ಮಾಸ್ಕ್ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಅವುಗಳನ್ನು ಒದಗಿಸಲು ಆರೋಗ್ಯ ಕಾರ್ಯಕರ್ತರಿಗೆ ಅವುಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈಗಾಗಲೇ ಅಮೆರಿಕಾದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ. ಒಟ್ಟಾರೆಯಾಗಿ 130 ಮಂದಿಯಲ್ಲಿ ಸೋಂಕು ಇರುವುದು ಧೃಢಪಟ್ಟಿದೆ.
ಅಮೆರಿಕಾದ ಕಾಂಗ್ರೆಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ 8 ಶತಕೋಟಿ ಡಾಲರ್ ನೀಡಲು ಒಪ್ಪಿಕೊಂಡಿತ್ತು.
ಈ ನಡುವೆ ಇಟಲಿಯಲ್ಲಿ ಕೋವಿಡ್ಗೆ ಮೃತಪಟ್ಟವರ ಸಂಖ್ಯೆ 107ಕ್ಕೇರಿದೆ. 28 ಜನರು ಕಳೆದ 24 ಗಂಟೆಯ ಅವಧಿಯಲ್ಲಿ ಬಲಿಯಾಗಿದ್ದಾರೆ. ಹಾಗಾಗಿ ಇಟಲಿಯಲ್ಲಿನ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.