ಕುವೈಟ್, ಮಾ.07 (DaijiworldNews/PY) : ಭಾರತ ಸೇರಿದಂತೆ ಏಳು ದೇಶಗಳಿಗೆ ವಿಮಾನ ಪ್ರಯಾಣಕ್ಕೆ ಏಕಾಏಕಿ ಕುವೈಟ್ನ ಆರೋಗ್ಯ ಅಧಿಕಾರಿಗಳು ನಿರ್ಬಂಧ ಹೇರಿದ್ದು, ಕೊರೊನಾ ವೈರಸ್ ಭೀತಿಯಿಂದ ಬರುವ ಹಾಗೂ ಹೋಗುವ ವಿಮಾನ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ.
ಈ ನಿರ್ಬಂಧವು ಶನಿವಾರದಿಂದ ಒಂದು ವಾರದವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೇ, ಭಾರತದ ಹೊರತಾಗಿ ಫಿಲಿಫೈನ್ಸ್, ಬಾಂಗ್ಲಾದೇಶ, ಶ್ರೀಲಂಕಾ, ಈಜಿಫ್ಟ್, ಸಿರಿಯಾ ಹಾಗೂ ಲೆಬನಾನ್ನಿಂದ ಕುವೈಟ್ಗೆ ಹಾರಾಟ ನಡೆಸುವ ಎಲ್ಲಾ ವಿಮಾನ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
ಕುವೈಟ್ ಕ್ಯಾಬಿನೆಟ್ ಹೇಳಿಕೆಯ ಪ್ರಕಾರ, ಕುವೈಟ್ ಪ್ರಧಾನಿ ಶೇಖ್ ಸಬಾ ಖಲೀದ್ ಅಲ್-ಹಮದ್ ಅಲ್-ಸಬಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತುರ್ತು ಸಭೆ ನಡೆಸಲಾಗಿತ್ತು. ಈ ತುರ್ತು ಸಭೆಯಲ್ಲಿ ಬಾಂಗ್ಲಾದೇಶ, ಫಿಲಿಫೈನ್ಸ್, ಭಾರತ, ಶ್ರೀಲಂಕಾ, ಲೆಬನಾನ್ ಹಾಗೂ ಈಜಿಫ್ಟ್ಗೆ ಬರುವ ಹಾಗೂ ಅಲ್ಲಿಂದ ಹಾರಾಟ ನಡೆಸುವ ವಿಮಾನಗಳ ಪ್ರಯಾಣಕ್ಕೆ ಒಂದು ವಾರಗಳ ಕಾಲ ನಿರ್ಬಂಧ ಹೇರುವಂತೆ ತೀರ್ಮಾನಿಸಲಾಗಿತ್ತು.
ಬೇರೆ ರಾಷ್ಟ್ರದಿಂದ ಕುವೈಟ್ಗೆ ಬರುವ ಅಥವಾ ಈ ಏಳು ದೇಶಗಳ ಹೊರತುಪಡಿಸಿ ವಿಮಾನ ನಿಲ್ಧಾಣದ ಮೂಲಕ ಬರುವ ಎಲ್ಲಾ ಪ್ರಯಾಣಿಕರು ಕಳೆದ ಎರಡು ವಾರಗಳಲ್ಲಿ ಮಾನ್ಯ ರೆಸಿಡೆನ್ಸಿ ಹಾಗೂ ವೀಸಾ ಹೊಂದಿದ್ದೂ ಈ ದೇಶಗಳಿಗೆ ಪ್ರಯಾಣಿಸಿದರೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಅಗತ್ಯದ ಕ್ರಮಗಳಿಗಾಗಿ ಆ ದೇಶದಲ್ಲಿ ವಾಸಿಸುವ ಕುವೈಟ್ನ ಪ್ರಜೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕುವೈಟ್ನ ಮಾಧ್ಯಮವೊಂದು ತಿಳಿಸಿದೆ.
ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಕೊರೊನಾ ವೈರಸ್ ತಗುಲಿಲ್ಲ ಎಂಬ ಧೃಢೀಕರಿಸುವ ಪತ್ರವನ್ನು ಕೊಂಡೊಯ್ಯುವಂತೆ ಒತ್ತಾಯಿಸಿದ ಕುವೈತ್ ಸರ್ಕಾರದ ಈ ವಿಚಾರವನ್ನು ರದ್ದುಪಡಿಸಿದ ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ತಿಳಿಸಿದ ಒಂದು ದಿನದ ಬಳಿ ಈ ನಿರ್ಬಂಧವನ್ನು ಹೇರಲಾಗಿದೆ.
ಈ ಕಾರಣದಿಂದ ಕೋಝಿಕ್ಕೋಡ್ನ ಕರಿಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಸುಮಾರು170 ಪ್ರಯಾಣಿಕರು ಸಿಲುಕಿದ್ದಾರೆ.