ಲಂಡನ್, ಮಾ 8 (Daijiworld News/MSP): ನೈಜಿರಿಯಾ ಮೂಲದ ಪ್ರಸ್ತುತ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂನಲ್ಲಿ ನೆಲೆಸಿರುವ ಸ್ವಯಂ ಘೋಷಿತ ಪಾದ್ರಿಯೊಬ್ಬನ ಕ್ರೂರ ಕೃತ್ಯವನ್ನು ಕಂಡು ಜಗತ್ತೆ ಬೆಚ್ಚಿಬಿದ್ದಿದೆ. ತಾನೇ ದೇವರ ಅವತಾರ ಎಂದು ಆಧ್ಯಾತ್ಮಿಕ ಸ್ನಾನದ ಹೆಸರಿನಲ್ಲಿ ಮಹಿಳೆಯರು, ಯುವತಿಯರು ಮಕ್ಕಳು ಮತ್ತು ಪುರುಷರ ಮೇಲೂ ಅತ್ಯಾಚಾರ ಎಸಗಿರುವ ಆರೋಪದಲ್ಲಿ 60 ವರ್ಷದ ಸ್ವಯಂ ಘೋಷಿತ ಪಾದ್ರಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ . ಈತ ನಡೆಸಿದ ಕ್ರೂರ ಕೃತ್ಯಕ್ಕೆ ಈತನ ಪತ್ನಿಯೂ ಜೊತೆಯಾಗಿದ್ದಾಳೆ.
ಆರೋಪಿಯನ್ನು ಮೈಕೆಲ್ ಒಲುರೊನ್ಬಿ ಎಂದು ಗುರುತಿಸಲಾಗಿದೆ. ಧಾರ್ಮಿಕವಾಗಿ ಗೌರಯುತ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಈ ಸ್ವಯಂಘೋಷಿತ ದೇವಮಾನ ಚರ್ಚಿನ ಮಕ್ಕಳು, ಹದಿಹರೆದವರು ಸೇರಿದಂತೆ ಮಹಿಳೆಯರು ಹಾಗೂ ಪುರುಷರ ಮೇಲೂ ಸುಮಾರು 20 ವರ್ಷಗಳಿಂದ ದೌರ್ಜನ್ಯ ಎಸಗಿದ್ದು, ಇದೀಗ ಪೊಲೀಸರ ತನಿಖೆ ಬಳಿಕ ತನ್ನ ತಪ್ಪೊಪ್ಪಿಕೊಂಡ ಬಳಿಕ 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಕೋರ್ಟ್ ವಿಚಾರಣೆ ವೇಳೆ, "ಅತ್ಯಾಚಾರ ಪ್ರಕರಣಗಳಲ್ಲೇ ಅತ್ಯಂತ ಕ್ರೂರ ಮತ್ತು ಕೆಟ್ಟ ಪ್ರಕರಣ" ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯವೂ ವಿಚಾರಣೆ ಸಂದರ್ಭ ಹಲವು ಸಂಗತಿಗಳು ಹೊರಬಿದ್ದಿದ್ದು, ಕೆಲ ಯುವತಿಯರು ಅನೇಕ ಬಾರಿ ಗರ್ಭಿಣಿಯರಾಗಿ ಗರ್ಭಪಾತಕ್ಕೂ ಒಳಗಾಗಿದ್ದಾರೆ. 15 ರೇಪ್, 7 ಸಾಂದರ್ಭಿಕ ಹಲ್ಲೆ ಹಾಗೂ 2 ಲೈಂಗಿಕ ದೌರ್ಜನ್ಯ ಸೇರಿದಂತೆ ಹೀಗೆ ಪ್ರತ್ಯೇಕ 88 ಸಂದರ್ಭಗಳಲ್ಲಿ ಒಲುರೊನ್ಬಿ ಅತ್ಯಾಚಾರವೆಸಗಿದ್ದಾನೆ.
ಆಧ್ಯಾತ್ಮಿಕ ಸ್ನಾನ ಮಾಡಲು ದೇವರೇ ತನಗೆ ಸೂಚನೆ ನೀಡಿದ್ದ ಎಂದು ಒಲುರೊನ್ಬಿ ನ್ಯಾಯಾಲಯದ ಎದುರು ಹೇಳಿಕೊಂಡಿದ್ದು, ನೀವು ಆಧ್ಯಾತ್ಮಿಕತೆ ಬಿಟ್ಟು ನಿಮ್ಮ ಲೈಂಗಿಕ ಹಸಿವನ್ನು ತೀರಿಸಿಕೊಳ್ಳಲು ಭಕ್ತರನ್ನು ಬಳಸಿಕೊಂಡಿದ್ದೀರಿ ಎಂದು ನ್ಯಾಯಾಲಯ ದೋಷಿ ಒಲುರೊನ್ಬಿ ವಿರುದ್ಧ ಕಿಡಿಕಾರಿದೆ. ಒಲುರೊನ್ಬಿಯ ಕೃತ್ಯಕ್ಕೆ ಸಹಕಾರ ನೀಡಿದ್ದ ಪತ್ನಿಗೂ ಕೂಡ 11 ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ.