ಜಪಾನ್, ಮಾ. 09 (Daijiworld News/MB) : ಈವರೆಗೆ ವಿಶ್ವದಲ್ಲಿ 3,500 ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ನ್ನು ಸೋಂಕು ಪೀಡಿತ ವ್ಯಕ್ತಿ ಎಲ್ಲರಿಗೂ ಹರಡಲೆಂದು ಬಾರ್ಗಳಿಗೆ ಹೋದ ಘಟನೆ ಜಪಾನ್ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
50 ವರ್ಷದ ಈ ವ್ಯಕ್ತಿಗೆ ಕೊರೊನಾ ವೈರಸ್ ತಗಲಿರುವುದು ದೃಢಪಟ್ಟ ಬಳಿಕ ಆತ ತನ್ನ ಕುಟುಂಬಸ್ಥರಲ್ಲಿ "ನಾನು ಕೊರೊನಾ ವೈರಸ್ ಹರಡಲು ಹೋಗುತ್ತಿದ್ದೇನೆ" ಎಂದು ತಿಳಿಸಿದ್ದಾನೆ.
ಆತನಿಗೆ ಕೊರೊನಾ ವೈರಸ್ ತಗಲಿರುವುದು ದೃಢಪಟ್ಟ ಬಳಿಕ ಅಗತ್ಯ ಚಿಕಿತ್ಸೆಗಳನ್ನು ನೀಡಿ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿತ್ತು. ಆತನ ಪೋಷಕರಿಗೂ ವೈರಸ್ ತಗಲಿತ್ತು. ಅವರ ಮಾತು ಕೇಳದೆಯೇ ಆತ ಕುಟುಂಬಸ್ಥರಲ್ಲಿ ಕೊರೊನಾ ವೈರಸ್ ಹರಡಲು ಹೋಗುತ್ತಿದ್ದೇನೆ ಎಂದು ಹೇಳಿ ಟ್ಯಾಕ್ಸಿ ಮೂಲಕ ಹೊರಟಿದ್ದಾನೆ.
ಆತ ಮೊದಲು ಒಂದು ಬಾರ್ಗೆ ಹೋಗಿ ಅಲ್ಲಿಂದ ಇನ್ನೊಂದು ಬಾರ್ಗೆ ತೆರಳಿದ್ದು ಅಲ್ಲಿ, "ಜಪಾನ್ನಲ್ಲಿ 1,000 ಕ್ಕೂ ಅಧಿಕ ಜನರಿಗೆ ಸೋಂಕಿರುವ ಕೊರೊನಾ ನನಗೂ ತಗಲಿದೆ" ಎಂದು ಎಲ್ಲರಿಗೂ ತಿಳಿಸಿದ್ದಾನೆ.
ಆ ಕೂಡಲೇ ಬಾರ್ನ ಸಿಬ್ಬಂದಿಗಳು ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಬಾರ್ಗೆ ಆಗಮಿಸಿದ್ದಾರೆ. ಆದರೆ ಆತ ಆಗಾಗಲೇ ಟ್ಯಾಕ್ಸಿ ಮೂಲಕ ತನ್ನ ಮನೆಗೆ ಹಿಂದಿರುಗಿದ್ದ.
ಆತ ಭೇಟಿ ನೀಡಿದ ಎರಡು ಬಾರ್ಗಳನ್ನು ಸ್ವಚ್ಛಗೊಳಿಸಲಾಗಿದ್ದು ಅಲ್ಲಿನ ಸಿಬ್ಬಂದಿಗಳನ್ನು ಹಾಗೂ ಗ್ರಾಹಕರನ್ನು ತಪಾಸಣೆ ಮಾಡಲಾಗಿದೆ.
ಆತನನ್ನು ಪ್ರಸ್ತುತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರಸಿ ತಿಳಿಸಿದೆ.