ದೋಹಾ, ಮಾ. 09 (Daijiworld News/MB) : 14 ದೇಶದ ಜನರಿಗೆ ಕತಾರ್ಗೆ ಆಗಮಿಸಲು ನಿರ್ಬಂಧ ಹೇರಲಾಗಿದೆ ಎಂದು ಕತಾರ್ ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ. ಈ ನಿರ್ಬಂಧವು ಮಾರ್ಚ್ 9 ರಿಂದ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರಲಿದೆ.
ವಿಶ್ವದಾದ್ಯಂತ ಬಹು ಬೇಗನೇ ಹರಡುತ್ತಿರುವ ಕೊರೊನಾ ವೈರಸ್ನ ಹಿನ್ನಲೆಯಿಂದಾಗಿ ಸರ್ಕಾರವು ಈ ಕ್ರಮ ಕೈಗೊಂಡಿದೆ.
ಕತಾರ್ ದೇಶಕ್ಕೆ , ಭಾರತ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಸಿರಿಯಾ, ನೇಪಾಳ, ಇರಾನ್, ಇರಾಕ್, ಈಜಿಪ್ಟ್, ಚೀನಾ, ಪಿಲಿಫಿನ್ಸ್, ಬಾಂಗ್ಲಾದೇಶ, ಲಿಬಾನನ್ ಹಾಗೂ ದಕ್ಷಿಣ ಕೊರಿಯಾ ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ.
ಕತಾರ್ನಲ್ಲಿ ಕೆಲಸದ ಪರವಾನಗಿ ಹೊಂದಿರುವವರು, ತಾತ್ಕಾಲಿಕ ಸಂದರ್ಶಕರು ಮತ್ತು ಆಗಮನಕ್ಕೆ ವೀಸಾ ಪಡೆಯಲು ಅರ್ಹರಾಗಿರುವ ದೇಶಗಳ ಜನರು ಸೇರಿದಂತೆ ಎಲ್ಲರಿಗೆ ಈ ನಿಷೇಧ ಜಾರಿಯಲ್ಲಿದೆ.
ಈ ಸಮಯದಲ್ಲಿ ದೇಶದಲ್ಲಿ ವಾಸಿಸುವ ಎಲ್ಲಾ ಜನರು ಮತ್ತು ಅದರ ನಾಗರಿಕರು ಸಾಧ್ಯವಾದಷ್ಟು ಇತರ ದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು ಎಂದು ಸರ್ಕಾರ ಒತ್ತಾಯಿಸಿದೆ. ಹಾಗೆಯೇ ದೇಶದಲ್ಲಿರುವ ಎಲ್ಲಾ ಜನರು ಬೇರೆ ದೇಶಗಳಿಗೆ ಪ್ರಯಾಣ ಮಾಡದಂತೆ ಸರ್ಕಾರ ಒತ್ತಾಯಿಸಿದೆ.
ದೇಶದ ಆರೋಗ್ಯ ಇಲಾಖೆಯು ಈ ನಿಷೇಧಕ್ಕೆ ಸಂಬಂಧಿಸಿ ಯಾವುದಾದರೂ ಅಗತ್ಯ ಬದಲಾವಣೆಗಳನ್ನು ಮಾಡುವವರೆಗೂ ಪ್ರಸ್ತಾಪಿತ 14 ದೇಶಗಳ ಜನರಿಗೆ ಪ್ರವೇಶದ ನಿರ್ಬಂಧ ಜಾರಿಯಲ್ಲಿರುತ್ತದೆ.