ದುಬೈ, ಮಾ.09 (DaijiworldNews/PY) : ಫೆ.9ರಂದು ವರ್ಷದ ಮೊದಲ ಸೂಪರ್ಮೂನ್ ಕಾಣಿಸಿಕೊಂಡ ಬಳಿಕ ಮಾ.9 ಸೋಮವಾರದಂದು ವರ್ಷದ ಎರಡನೇ ಸೂಪರ್ಮೂನ್ ಕಾಣಿಸಿಕೊಳ್ಳಲು ಸಿದ್ದವಾಗಿದ್ದು, ಭೂಮಿಯ ಅತ್ಯಂತ ಸಮೀಪದಲ್ಲಿರುವ ಚಂದ್ರ ಎಂದಿಗಿಂತಲೂ ದೊಡ್ಡ ಗಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಈ ಕಾರಣದಿಂದ ಸೂಪರ್ಮೂನ್ ಎಂದು ಕರೆಯಲಾಗುತ್ತದೆ. ಎರಡನೇ ಸೂಪರ್ಮೂನ್ಗೆ ವರ್ಮ್ ಮೂನ್ ಎಂದ ಹೆಸರಿಡಲಾಗಿದೆ.
ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಳ್ಳುವ ಸೂಪರ್ಮೂನ್ ಭಾನುವಾರ ಮುಂಜಾನೆ ಆರಂಭಗೊಂಡಿದ್ದು, ಬುಧವಾರ ಬೆಳಗ್ಗಿನವರೆಗೆ ಸುಮಾರು ಮೂರು ದಿನಗಳ ಕಾಲ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ. ಸೋಮವಾರ ಅದು ತನ್ನ ಗರಿಷ್ಠ ಪೂರ್ಣತೆಯಲ್ಲಿ ಕಾಣಿಸಿಕೊಳ್ಳಲಿದೆ.
ಭೂಮಿಯ ಸುತ್ತಲಿನ ಚಂದ್ರನ ಕಕ್ಷೆಯು ಪ್ರತಿಯೊಂದು ಗ್ರಹದಂತೆ ವರ್ತುಲಾಕಾರದಲ್ಲಿಲ್ಲ. ಅದು ದೀರ್ಘ ವೃತ್ತಾಕಾರವನ್ನು ಅಥವಾ ಅಂಡಾಕಾರ ಹೊಂದಿದೆ. ಅಂದರೆ, ಭೂಮಿಯನ್ನು ಚಂದ್ರ ಪರಿಭ್ರಮಿಸುವಾಗ ಹತ್ತಿರಕ್ಕೆ ಬರುತ್ತಾನೆ ದೂರಕ್ಕೆ ಸರಿಯುತ್ತಾನೆ. ಹುಣ್ಣಿಮೆಗೆ ಇನ್ನೆರಡು ದಿನಗಳು ಬಾಕಿ ಇರುವಾಗ ನಮ್ಮ ಗ್ರಹಕ್ಕೆ ಚಂದ್ರ ಅತ್ಯಂತ ಸಮೀಪಕ್ಕೆ ಬಂದಾಗ ಅದನ್ನು ಸೂಪರ್ಮೂನ್ ಎಂದು ಕರೆಯಲಾಗುತ್ತದೆ. ಈ ವೇಳೆ ಚಂದ್ರ ಎಂದಿಗಿಂತಲೂ ದೊಡ್ಡ ಗಾತ್ರದಲ್ಲಿ ಹಾಗೂ ಅತ್ಯಂತ ಪ್ರಕಾಶಮಾನವಾಗಿ ಪ್ರದರ್ಶನವಾಗುತ್ತಾನೆ. 1979ರಲ್ಲಿ ಮೊದಲ ಬಾರಿಗೆ ಸೂಪರ್ಮೂನ್ ಪದ ಮೊದಲ ಬಾರಿಗೆ ಚಾಲ್ತಿಗೆ ಬಂದಿದ್ದು, ಶೀಘ್ರವೇ ಅತ್ಯಂತ ಪ್ರಸಿದ್ದತೆಯನ್ನು ಗಳಿಸಿಕೊಂಡಿತ್ತು.
ಉತ್ತರ ಅಮೆರಿಕದ ದಕ್ಷಿಣಕ್ಕೆ ನಿಕಟವಾಗಿರುವ ಬುಡಕಟ್ಟು ಜನರು ಸೋಮವಾರದ ಸೂಪರ್ಮೂನ್ಗೆ ವರ್ಮ್ ಮೂನ್ ಎಂದು ನಾಮಕರಣ ಮಾಡಿದ್ಧಾರೆ. ಈ ಸಮಯದಲ್ಲಿ ಭೂಮಿಯ ಮಣ್ಣು ಸಡಿಲಗೊಂಡು ಎರೆಹುಳುಗಳ ಕುರುಹುಗಳು ಮೇಲ್ಮೈಯಲ್ಲಿ ಕಂಡುಬರುವುದರೊಂದಿಗೆ ವಸಂತ ಋತುವಿನ ಆಗಮನವನ್ನು ತಿಳಿಸುತ್ತದೆ. ಈ ಕಾರಣದಿಂದ ಈ ವರ್ಷದ ಎರಡನೇ ಸೂಪರ್ ಮೂನ್ಗೆ ವರ್ಮ್ಮೂನ್ ಎಂದು ಹೆಸರಿಸಲಾಗಿದೆ.
ಈ ವರ್ಷದ ಮುಂದಿನ ಸೂಪರ್ಮೂನ್ ಸೂಪರ್ ಪಿಂಕ್ಮೂನ್ ಎ.8ರಂದು ಕಾಣಿಸಿಕೊಳ್ಳಲಿದೆ.