ಸೌದಿ ಆರೇಬಿಯಾ, ಮಾ. 09 (Daijiworld News/MB) : ವಿಶ್ವದೆಲ್ಲೆಡೆ ತನ್ನ ಕರಾಳ ಹಸ್ತವನ್ನು ಚಾಚಿರುವ ಕೊರೊನಾ ವೈರಸ್ ಷೇರು ಮಾರುಕಟ್ಟೆಯ ಮೇಲೂ ತನ್ನ ಪರಿಣಾಮ ಬೀರಿದೆ. ಷೇರು ಮಾರುಕಟ್ಟೆಯ ಕುಸಿತ ಕಾಣುತ್ತಿದ್ದು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೇಡಿಕೆಯೂ ಕುಸಿದಿದೆ. ಈ ನಡುವೆ ರಷ್ಯಾ ಜೊತೆಗೆ ಬೆಲೆ ಸಮರ ಆರಂಭಿಸಿರುವ ಸೌದಿ ಆರೇಬಿಯಾ ಕಚ್ಚಾತೈಲದ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ.
ಈವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾತೈಲವನ್ನು 31.02 ಡಾಲರ್ಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಅದರ ಬೆಲೆಯನ್ನು ಕೇವಲ 14.25 ಡಾಲರ್ಗೆ ಇಳಿಸಲಾಗಿದೆ. ಅಂದರೆ ದಿಢೀರನೇ ತೈಲದ ಬೆಲೆಯನ್ನು ಶೇ. 31.5ರಷ್ಟು ಇಳಿಸಲಾಗಿದೆ.
ಗಲ್ಫ್ ಯುದ್ಧದ ಸಂದರ್ಭದಲ್ಲಿ ಜನವರಿ 17, 1991ರ ಬಳಿಕ ಇದೇ ಮೊದಲು ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
ವಿಶ್ವದಲ್ಲೇ ಅತೀ ಹೆಚ್ಚು ತೈಲ ಉತ್ಪಾದನೆ ಮಾಡುವ ರಾಷ್ಟ್ರ ಸೌದಿ ಅರೇಬಿಯಾವಾಗಿದ್ದು ರಷ್ಯಾ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ರಷ್ಯಾಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾ ತನ್ನ ಬೆಲೆ ಸಮರವನ್ನು ಆರಂಭಿಸಿದೆ ಎಂದು ಹೇಳಲಾಗುತ್ತಿದೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ಒಪೆಕ್ ಸಂಸ್ಥೆ ಎದುರು ಬೆಲೆ ಕಡಿತವನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಕೊರೋನಾ ವೈರಸ್ನಿಂದ ಇಡೀ ವಿಶ್ವದ ಆರ್ಥಿಕತೆ ಕುಸಿತದ ಹಾದಿಯಲ್ಲಿದ್ದು, ತೈಲಗಳ ಬೆಲೆಯನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ದಿಢೀರ್ ಬೆಲೆ ಇಳಿಕೆ ಪ್ರಸ್ತಾವಕ್ಕೆ ಒಪೆಕ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದೆ.