ಲಂಡನ್, ಮಾ. 11 (Daijiworld News/MB) : ಬ್ರಿಟನ್ ಆರೋಗ್ಯ ಖಾತೆ ಸಚಿವೆ ನಡೈನ್ ಡೋರಿಸ್ (62) ಕೊರೊನಾ ವೈರಸ್ ಸೋಂಕಿತರಾಗಿದ್ದು ಕೊರೊನಾ ವೈರಸ್ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಬಂದಿರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.
"ಪರೀಕ್ಷೆ ನಡೆಸಿದಾಗ ಕೊರೊನಾ ವೈರಸ್ ತಗಲಿರುವುದು ದೃಢಪಟ್ಟಿದೆ. ಸೋಂಕು ಇರುವುದನ್ನು ಖಚಿತಪಡಿಸುತ್ತಿದ್ದೇನೆ ಹಾಗೂ ನಾನು ಮನೆಯಲ್ಲಿಯೇ ಇದ್ದು ಸೋಂಕು ಹರಡದಂತೆ ಎಚ್ಚರವಹಿಸಿದ್ದೇನೆ" ಎಂದು ಡೋರಿಸ್ ಹೇಳಿದ್ದಾರೆ.
ಕೊರೊನಾ ವೈರಸ್ ಸಚಿವೆಗೆ ಎಲ್ಲಿಂದ ತಗುಲಿದೆ ಹಾಗೂ ಅವರು ಯಾರೊಂದಿಗೆಲ್ಲ ಸಂಪರ್ಕ ಹೊಂದಿದ್ದರು ಎಂಬುದನ್ನು ಆರೋಗ್ಯ ಅಧಿಕಾರಿಗಳು ಪತ್ತೆ ಮಾಡುವ ಪ್ರಯತ್ನದಲ್ಲಿದ್ದಾರೆ.
ಕೊರೊನಾ ವೈರಸ್ ದೃಢಪಟ್ಟಿರುವ ಮೊದಲ ಬ್ರಿಟಿಷ್ ರಾಜಕಾರಣಿ ಡೋರಿಸ್ ಆಗಿದ್ದು ಅವರು ಇತ್ತೀಚೆಗೆ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ನೂರಾರು ಜನರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಹಾಗೆಯೇ ಕಂಪನಿಗಳು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗಾಗಿ ವಿಮೆ ಸೌಲಭ್ಯ ನೀಡುವುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಡತಗಳಿಗೆ ಸಹಿ ಹಾಕುವ ಸಂದರ್ಭದಲ್ಲಿ ಡೋರಿಸ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ವರದಿಯಾಗಿದೆ.
ಈವರೆಗೆ ಬ್ರಿಟನ್ನಲ್ಲಿ 370ಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಆ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ.