ಬೀಜಿಂಗ್, ಮಾ.13 (DaijiworldNews/PY) : ಜಗತ್ತಿನ ಜನರನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸಂಶೋಧನೆ ಮಧ್ಯೆ ರೋಗಿಯ ಶ್ವಾಸಕೋಶದಲ್ಲಿ ನೂತನ ಸೋಂಕು ಸುಮಾರು 37 ದಿನಗಳ ಕಾಲ ಜೀವಂತವಾಗಿರುತ್ತದೆ ಎಂದು ಸಂಶೋಧನಾ ಲೇಖನವೊಂದು ಹೇಳಿದೆ.
ಕೊರೊನಾ ಸೋಂಕು ಪೀಡಿತ ರೋಗಿಯ ಶ್ವಾಸಕೋಶದಲ್ಲಿ ಸುಮಾರು 37 ದಿನಗಳ ಕಾಲ ಜೀವಂತವಾಗಿರುವುದರೊಂದಿಗೆ ಈ ಸೋಂಕು ಹಲವು ವಾರಗಳವರೆಗೆ ರೋಗಾಣು ಹರಡಲಿದೆ ಎಂದು ತಿಳಿಸಿದೆ.
ಕೊರೊನಾ ಸೋಂಕು ತಗುಲಿದ 20 ದಿನಗಳ ಬಳಿಕವೂ ಬದುಕಿರುವ ರೋಗಿಯ ತಪಾಸಣೆ ನಡೆಸಿದ ಚೀನಾ ವೈದ್ಯರು, ಈ ಸೋಂಕು ರೋಗಾಣುವನ್ನು ನಿಗ್ರಹಿಸುವುದು ಎಷ್ಟು ಕಷ್ಟಕರ ಎಂಬುವುದನ್ನು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಜಗತ್ತಿನ 118 ದೇಶಗಳಿಗೆ ಈ ಹೊಸ ಕೊರೊನಾ ಸೋಂಕು ರೋಗ ವ್ಯಾಪಿಸಿದ್ದು, ಸುಮಾರು 1,25,000 ಜನರು ಸೋಂಕು ಪೀಡಿತರಾಗಿದ್ದಾರೆ. ಕೊರೊನಾ ವೈರಸ್ ಮೊದಲು ಚೀನಾದ ವುಹಾನ್ನಲ್ಲಿ ಪ್ರಾರಂಭಗೊಂಡಿದ್ದು, ಇದೀಗ ವಿಶ್ವಾದ್ಯಂತ ಆತಂಕ ಸೃಷ್ಠಿಸಿದೆ.
ಸ್ಥಳೀಯ ಅಧಿಕಾರಿಗಳು ಕೊರೊನಾ ವೈರಸ್ ಇತರ ದೇಶಗಳಿಗೆ ಹಬ್ಬದಂತೆ ತಡೆಯಲು ಹರಸಾಹಸ ಪಡುತ್ತಿದ್ಧಾರೆ. ಆದರೆ, ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಕೊರೊನಾ ವೈರಸ್ ಪಸರಿಸಿದೆ.