ಮಸ್ಕತ್, ಮಾ.16 (DaijiworldNews/PY) : ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟುವ ಸಲುವಾಗಿ ಓಮಾನ್ನ ಸರ್ವೋಚ್ಚ ಸಮಿತಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.
ಮಾ.15 ಭಾನುವಾರದಂದು ದೇಶದ ಆಂತರಿಕ ಸಚಿವ ಸಯ್ಯಿದ್ ಹಮೂದ್ ಬಿನ್ ಫೈಸಲ್ ಅಲ್ ಬುಸ್ಸೈದಿ ಅವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯ ಬಳಿಕ ಸಮಿತಿಯು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಂಡಿದೆ.
ಮೊದಲ ನಿಯಮದಂತೆ, ದೇಶಕ್ಕೆ ಸಮುದ್ರ ಮಾರ್ಗವಾಗಿ ಹಾಗೂ ಭೂ ಮಾರ್ಗವಾಗಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ, ಈ ನಿಯಮ ಗಲ್ಫ್ ದೇಶಗಳ ನಾಗರಿಕರಿಗೆ ಅನ್ವಯಿಸುವುದಿಲ್ಲ. ಈ ಮೂರು ವಿಧಾನಗಳ ಮೂಲಕ ದೇಶಕ್ಕೆ ಪ್ರವೇಶಿಸುವ ಎಲ್ಲಾ ಜನರ ಸಂಪರ್ಕ ತಡೆಹಿಡಿಯಲಾಗಿದ್ದು, ಇದು ಓಮಾನ್ನ ನಾಗರಿಕರಿಗೂ ಅನ್ವಯಿಸುತ್ತದೆ.
ಎಲ್ಲಾ ಸಾರ್ವಜನಿಕ ಪಾರ್ಕ್ಗಳನ್ನು ಹಾಗೂ ಗಾರ್ಡನ್ಗಳನ್ನು ಮುಂದಿನ ಸೂಚನೆ ಬರುವವರೆಗೂ ಮುಚ್ಚಲಾಗುವುದು. ದೇಶಾದ್ಯಂತ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ಸಭೆ ನಡೆಯುವುದಿಲ್ಲ. ಅಲ್ಲದೇ ಮುಂದಿನ ಸೂಚನೆ ಬರುವವರೆಗೂ ಯಾವುದೇ ಸಾಮಾಜಿಕ ಕೂಟಗಳು ಹಾಗೂ ವಿವಾಹ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಕ್ರಮಗಳು ಮಾ.17 ಮಂಗಳವಾರದಿಂದ ಜಾರಿಯಲ್ಲಿರುತ್ತವೆ. ಓಮಾನ್ನ ಸುಲ್ತಾನೇಟ್ನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಆಡಳಿತ ಮಂಡಳಿಯೊಂದಿಗೆ ಸಹಕರಿಸುವಂತೆ ಸಮಿತಿ ತಿಳಿಸಿದೆ.