ಇಸ್ಲಾಮಾಬಾದ್, ಮಾ 17 ( Daijiworld News/MSP): ಚೀನಾದಲ್ಲಿ ಹುಟ್ಟಿ ಇಡೀ ವಿಶ್ವವನ್ನೇ ವ್ಯಾಪಿಸುತ್ತಿರುವ ಕೊರೊನಾ ಹಾವಳಿ ದುಷ್ಪರಿಣಾಮ ದಿನಗಳೆದಂತೆ ಭವಿಷ್ಯದ ಭೀಕರತೆಯನ್ನು ಸಾರುತ್ತಿದೆ. ದಿನನಿತ್ಯ ನೂರಾರು ಜನರನ್ನು ಬಲಿಪಡೆದುಕೊಳ್ಳುತ್ತಿರುವ ಕೊರೊನಾ, ಚೀನಾ ,ಇಟಲಿ ಹಾಗೂ ಇರಾನ್ ನಲ್ಲಿ ತನ್ನ ರುದ್ರ ನರ್ತನ ಮುಂದುವರಿಸಿದೆ. ಇದೇ ಸಾಲಿಗೆ ಪಾಕಿಸ್ತಾನವೂ ಸೇರಲಿದೆ ಎಂಬ ಸಂಶಯ ಇದೀಗ ವಿಶ್ವವನ್ನೇ ಕಾಡತೊಡಗಿದೆ.
ಒಂದು ವಾರದ ಹಿಂದೆ ಪಾಕಿಸ್ತಾನದಲ್ಲಿ ಭಾರತ ದೇಶಕ್ಕಿಂತ ಕಡಿಮೆ ಕೊರೋನಾ ಸೋಂಕಿತರ ಪ್ರಕರಣ ದಾಖಲಾಗಿದ್ದವು. ಆದರೆ ಮಂಗಳವಾರದಂದು ಸೋಂಕಿತದ ಸಂಖ್ಯೆ ದಿಢೀರನೇ ನಾಲ್ಕು ಪಟ್ಟು ಹೆಚ್ಚಾಗಿದೆ. ಸೋಮವಾರ ಒಂದೇ ದಿನ ಪಾಕಿಸ್ತಾನದಲ್ಲಿ 90 ಪ್ರಕರಣ ದಾಖಲಾಗಿದೆ. ಹೀಗಾಗಿ ಪಾಕ್ ನಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 187ಕ್ಕೆ ತಲುಪಿದೆ.
ದಕ್ಷಿಣ ಸಿಂಧ್ ಭಾಗದಲ್ಲಿ ಹೆಚ್ಚು ಕೊರೋನಾ ಪ್ರಕರಣ ದಾಖಲಾಗಿವೆ. ಒಂದೇ ದಿನಕ್ಕೆ 90 ಕೊರೊನಾ ಪ್ರಕರಣ ದಾಖಲಾಗಿರುವುದು ಅಲ್ಲಿನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೋಂಕಿತರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಮುಂದಿನ ದಿನಗಳಲ್ಲಿ ಸಾವು ದಾಖಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇಟಲಿಯಲ್ಲಿ ಒಂದೇ ವಾರದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 2 ಸಾವಿರ ತಲುಪಿದೆ. ಇರಾನ್ನಲ್ಲಿ ಸಾವಿನ ಸಂಖ್ಯೆ 800ರ ಗಡಿಯ ಆಸುಪಾಸಿನಲ್ಲಿದೆ. ಮಾತ್ರವಲ್ಲದೆ ಈ ಎರಡು ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಾಣುತ್ತಿದೆ. ಹೀಗಾಗಿ, ಪಾಕ್ನಲ್ಲೂೇಕಾಏಕಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಸ್ಥಿತಿ ಗಮನಿಸಿದರೆ ಇಟಲಿ , ಇರಾನ್ ಪರಿಸ್ಥಿತಿಯೇ ಬರಬಹುದು ಎನ್ನಲಾಗುತ್ತಿದೆ.