ಬೀಜಿಂಗ್, ಮಾ 17(DaijiworldNews/SM): ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪರೀಕ್ಷೆ ಆವಿಷ್ಕಾರಗಳನ್ನು ನಡೆಸಲಾಗುತ್ತಿದೆ. ವೈರಸ್ ಕುರಿತಾದ ಹಲವಾರು ವಿಚಾರಗಳನ್ನು ಕಂಡುಕೊಳ್ಳಲಾಗಿದೆ. ಇದೀಗ ಹೊಸದೊಂದು ವಿಚಾರವನ್ನು ಶೋಧನೆಯ ಬಳಿಕ ಬಹಿರಂಗಗೊಳಿಸಲಾಗಿದೆ. ಯಾವ ಬ್ಲಡ್ ಗ್ರೂಪ್ ಹೊಂದಿದವರಿಗೆ ಕೊರೊನಾ ಬೇಗನೇ ದಾಳಿಯಾಗುತ್ತದೆ ಎಂಬ ವಿಚಾರವೊಂದು ಬಹಿರಂಗಗೊಂಡಿದ್ದು, ರಕ್ತದ ಗುಂಪು 'ಎ' ಹೊಂದಿರುವ ಜನರು ಕೊರೊನಾ ವೈರಸ್ (ಸಿಒವಿಐಡಿ -19) ಸೋಂಕಿಗೆ ಹೆಚ್ಚು ಒಳಗಾಗಬಹುದು ಎನ್ನಲಾಗಿದೆ. ಆದರೆ ರಕ್ತದ ಗುಂಪು 'ಒ' ಹೊಂದಿರುವವರಿಗೆ ಅಪಾಯ ಕಡಿಮೆ ಎಂಬುವುದು ವರದಿಯಲ್ಲಿ ತಿಳಿದುಬಂದಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿರುವ ಪ್ರಕಾರ ಪ್ರಾಥಮಿಕ ಅಧ್ಯಯನವು ಚೀನಾದಲ್ಲಿ ಸೋಕಿಗೆ ತುತ್ತಾದವರು ಹಾಗೂ ಮೃತಪಟ್ಟವರ ರಕ್ತದ ಗುಂಪನ್ನು ಸಂಗ್ರಹಿಸಿ ಈ ವರದಿ ಮಾಡಿದೆ ಎನ್ನಲಾಗಿದೆ. ವುಹಾನ್ ವಿಶ್ವವಿದ್ಯಾಲಯದ ಆಸ್ಪತ್ರೆಯ ಸೆಂಟರ್ ಫಾರ್ ಎವಿಡೆನ್ಸ್-ಬೇಸ್ಡ್ ಮತ್ತು ಟ್ರಾನ್ಸ್ಟಮೆಂಟಲ್ ಮೆಡಿಸಿನ್ನೊಂದಿಗೆ ವಾಂಗ್ ಕ್ಸಿಂಗ್ಹುವಾನ್ ನೇತೃತ್ವದ ಸಂಶೋಧಕರು 2,000 ಕ್ಕೂ ಹೆಚ್ಚು ಸೋಂಕಿತರ ರಕ್ತ ಗುಂಪು ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಇದರ ಪ್ರಕಾರ ಎ ಗುಂಪು ಹೊಂದಿರುವ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಪತ್ತೆಯಾಗಿದೆಯಂತೆ. ಅಲ್ಲದೆ, ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಹೊಂದಿದ್ದರು ಎಂದು ಅವರು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ."ರಕ್ತ ಗುಂಪು ‘ಎ’ ಯನ್ನು ಹೊಂದಿರುವ ಜನರು ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ವಿಶೇಷವಾಗಿ ವೈಯಕ್ತಿಕ ರಕ್ಷಣೆಯನ್ನು ಮಾಡುವ ಅಗತ್ಯವಿದೆ" ಎಂದು ಲೇಖಕರು ಬರೆದಿದ್ದಾರೆ.
"ಒ-ಅಲ್ಲದ ರಕ್ತ ಗುಂಪುಗಳೊಂದಿಗೆ ಹೋಲಿಸಿದರೆ ರಕ್ತ ಗುಂಪು ಒ ಸಾಂಕ್ರಾಮಿಕ ಕಾಯಿಲೆಗೆ ಗಮನಾರ್ಹವಾಗಿ ಕಡಿಮೆ ಅಪಾಯವನ್ನು ಹೊಂದಿದೆ" ಎಂದು ಅಧ್ಯಯನವು ಇನ್ನೂ ಪೀರ್ ಪರಿಶೀಲಿಸಬೇಕಿದೆ ಎಂದು ಹೇಳಿದರು.
ಯುಎಸ್ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (ಎನ್ಸಿಬಿಐ) ಅಧ್ಯಯನದ ಪ್ರಕಾರ, 'ಒ' ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ರಕ್ತ ಗುಂಪು(ಶೇಕಡಾ 37.12), ಬಿ ನಂತರದ ಸ್ಥಾನದಲ್ಲಿ 32.26 ಶೇಕಡಾ, ಎ ಶೇಕಡಾ 22.88 ಮತ್ತು ಎಬಿ 7.74 ರಷ್ಟು ಮಾತ್ರವೇ ಇದೆ ಎಂದಿದೆ.