ಲಂಡನ್, ಮಾ.18 (DaijiworldNews/PY) : ನನಗೆ ತಗುಲಿದ್ದ ಕೊರೊನಾ ವೈರಸ್ ಸೋಂಕನ್ನು ಪ್ಯಾರಾಸಿಟಮೊಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಕುಡಿದು ಗುಣಪಡಿಸಿಕೊಂಡಿದ್ದೇನೆ ಎಂದು ಬ್ರಿಟಿಷ್ ವೈದ್ಯೆಯೊಬ್ಬರು ಹೇಳಿಕೊಂಡಿದ್ದಾರೆ.
ಲಂಡನ್ ಮೂಲದ ವೈದ್ಯೆಯಾಗಿರುವ ಕ್ಲೇರಾ ಗೆರಡಾ (60) ಅವರು ಕೊರೊನಾ ವೈರಸ್ ಗೆದ್ದುಬಂದವರಾಗಿದ್ದಾರೆ. ಕ್ಲೇರಾ ಅವರು, ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್ ಮುಖ್ಯಸ್ಥೆಯಾಗಿದ್ದು, ಇತ್ತೀಚೆಗೆ ನ್ಯೂಯಾರ್ಕ್ ಸಮ್ಮೇಳನಕ್ಕೆ ಹೋಗಿದ್ದ ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎನ್ನಲಾಗಿದೆ. ಮಾರಣಾಂತಿಕ ಕೊರೊನಾ ವೈರಸ್ನಿಂದ ಬಳಲುತ್ತಿದ್ದ ವೈದ್ಯೆ ಸ್ವತಃ ತಾವೇ ತಮಗೆ ಚಿಕಿತ್ಸೆ ಕೊಟ್ಟುಕೊಂಡು ಮಾರಕ ಸೋಂಕಿನ ವಿರುದ್ದ ಗೆದ್ದುಬಂದಿದ್ದಾರೆ. ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಕುಡಿದು ಅವರು ಕೊರೊನಾದಿಂದ ಗುಣವಾಗಿದ್ದಾರೆ.
ನ್ಯೂಯಾರ್ಕ್ ಸಮ್ಮೇಳನದಿಂದ ವೈದ್ಯೆ ವಾಪಸ್ಸಾದ ನಂತರ ಅವರಿಗೆ ಜ್ವರ, ಚಳಿ, ಗಂಟಲು ನೋವು, ತಲೆತಿರುಗುವಿಕೆ, ಕೀಲು ನೋವು, ಕೆಮ್ಮು, ತಲೆನೋವು ಕಾಣಿಸಿಕೊಂಡ ಹಿನ್ನೆಲೆ ತಪಾಸಣೆ ನಡೆಸಿದ ಸಂದರ್ಭ ವೈದ್ಯೆಗೆ ಕೊರೊನಾ ವೈರಸ್ ತಗುಲಿರುವುದು ತಿಳಿದುಬಂದಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ವೈದ್ಯೆ, ನನಗೆ ಸೋಂಕು ತಗುಲಿದ ನಂತರ ನಾನು ಸಂಪೂರ್ಣ ನಿಶ್ಶಕ್ತಳಾದೆ. 50 ಪೌಂಡ್ ಭಾರವನ್ನು ನನಗೆ ಎತ್ತಲು ಆಗುತ್ತಿರಲಿಲ್ಲ. ನನ್ನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆದರೆ, ನಾನು ಅದಕ್ಕೆ ಅಂಜಲಿಲ್ಲ. ಕೊರೊನಾ ಸೋಂಕಿನ ವಿರುದ್ದ ಹೋರಾಡಲು ಏನು ಮಾಡುವುದು ಎಂದು ಯೋಚಿಸಿದೆ. ಆ ನಂತರ ನಾನು ನಿರಂತರವಾಗಿ ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಕುಡಿದೆ ಸೋಂಕು ಕಡಿಮೆಯಾಗುತ್ತಾ ಬಂತು. ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ ಎಂದು ಹೇಳಿದರು.
ಜನರು ಯಾಕೆ ಕೊರೊನಾ ವೈರಸ್ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ಆದರೆ, ನನ್ನಂತೆಯೇ ಬಹುತೇಕ ಮಂದಿ ಸೋಂಖಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ಮಾರಣಾಂತಿಕ ಕಾಯಿಲೆ ಅಲ್ಲ. ಹೆದರಿಕೊಳ್ಳದೇ, ಧೈರ್ಯದಿಂದಿರಿ ಎಂದು ವೈದ್ಯೆ ತಿಳಿಸಿದ್ದಾರೆ.
ಇಡೀ ಜಗತ್ತಿಗೆ ಕೊರೊನಾ ವೈರಸ್ ಅನ್ನು ಹೇಗೆ ನಿಯಂತ್ರಣ ಮಾಡಬೇಕು ಎಂದು ತಿಳಿಯುತ್ತಿಲ್ಲ. ಹಾಗಾಗಿ, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈಗ ಸೋಂಕಿತರ ಸಾವಿನ ಸಂಖ್ಯೆ 8 ಸಾವಿರಕ್ಕೆ ಏರಿದೆ. ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 7,894 ದಾಟಿದೆ. 1,94,584 ಸೋಂಕಿತರಿದ್ದು, ಇದುವರೆಗೂ 81,080 ಮಂದಿ ಗುಣಮುಖರಾಗಿದ್ದಾರೆ.