ರೋಮ್, ಮಾ.20 (DaijiworldNews/PY) : ಇಡೀ ಜಗತ್ತನ್ನೇ ಕೊರೊನಾ ವೈರಸ್ ಆತಂಕಕ್ಕೆ ತಳ್ಳಿದ್ದು, ವಿಶ್ವದಾದ್ಯಂತ ಈವರೆಗೂ 9 ಸಾವಿರಕ್ಕೂ ಜನರನ್ನು ಬಲಿಪಡೆದಿದೆ. ಈ ನಡುವೆ ಅಚ್ಚರಿಯ ಮಾಹಿತಿಯೊಂದು ಕೇಳಿ ಬಂದಿದ್ದು, ಕೊರೊನ ಸೋಂಕಿತರ ಸಾವಿನ ಪಟ್ಟಿಯಲ್ಲಿ ಚೀನಾವನ್ನೇ ಇಟಲಿ ಮೀರಿಸಿದೆ ಎಂದು ವರದಿಯಾಗಿದೆ.
ಅಧಿಕೃತ ವರದಿಗಳ ಪ್ರಕಾರ, ಕೊರೊನಾ ಸೋಂಕಿಗೆ ಈವರೆಗೆ ಬಲಿಯಾದವರ ಸಂಖ್ಯೆ 3,245. ಆದರೆ ಕೊರೊನಾ ಸೋಂಕಿಗೆ ಇಟಲಿಯಲ್ಲಿ ಸಾವನ್ನಪ್ಪಿದ್ದವರು 3,405. ಮೊದಲು ಕೊರೊನಾ ಕಾಣಿಸಿಕೊಂಡಿದ್ದು ಚೀನಾದಲ್ಲಿ. ಕಳೆದ ವರ್ಷ ಡಿಸೆಂಬರ್ನಲ್ಲಿ ವುಹಾನ್ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಬಳಿಕ ಹಲವು ರಾಷ್ಟ್ರಗಳಿಗೆ ಹರಡಿತ್ತು. ಅದರಲ್ಲಿ ಇಟಲಿ ಕೂಡಾ ಕೊರೊನಾ ಸೋಂಕಿಗೆ ಒಳಪಟ್ಟಿತ್ತು. ಚೀನಾದಲ್ಲಿ ಶುರುವಾದ ಈ ಸೋಂಕು ಚೀನಾಗಿಂತ ಅಧಿಕವಾಗಿ ಇಟಲಿ ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಲ್ಲಿ ಆತಂಕ ಸೃಷ್ಠಿಸಿದೆ.
ಆಯಾ ರಾಷ್ಟ್ರಗಳ ಅಧಿಕೃತ ವರದಿಗಳ ಪ್ರಕಾರ, ಚೀನಾದಲ್ಲಿ ಒಟ್ಟು ಕೊರೊನಾ ಕೇಸ್ಗಳ ಸಂಖ್ಯೆ 80,928, ಇಟಲಿಯಲ್ಲಿ 41,035. ಹಾಗೆಯೇ ಚೀನಾದಲ್ಲಿ ಹೊಸ ಕೇಸ್ಗಳ ಸಂಖ್ಯೆ 34, ಇಟಲಿಯಲ್ಲಿ 5,322 ಆಗಿದೆ. ಚೀನಾದಲ್ಲಿ ಹೊಸ ಸಾವಿನ ಸಂಖ್ಯೆ 8 ಇದ್ದರೆ, ಇಟಲಿಯಲ್ಲಿ 427. ಚೀನಾದಲ್ಲಿ ಕೊರೊನಾ ಸೋಂಕಿನಿಂದ 70,420 ಜನರು ಗುಣಮುಖರಾದರೆ, ಇಟಲಿಯಲ್ಲಿ 4,440 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ಎರಡು-ಮೂರು ದಿನಗಳ ಹಿಂದೆ ಕೇವಲ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.